ಬಸ್-ಲಾರಿ ಮುಖಾಮುಖಿ ಢಿಕ್ಕಿ: 12 ಮಂದಿಗೆ ಗಂಭೀರ ಗಾಯ
.jpg)
ಉಪ್ಪಿನಂಗಡಿ, ಜೂ.30: ಕಂಟೈನರ್ ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಹನ್ನೆರಡು ಮಂದಿ ಗಂಭೀರ ಗಾಯಗೊಂಡು, ಸುಮಾರು 4 ಗಂಟೆಗಳ ಕಾಲ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾದ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಗುರುವಾರ ಬೆಳಗ್ಗೆ ಸಂವಿಸಿದೆ.
ಬೆಂಗಳೂರಿನಿಂದ ಮಂಗಳೂರಿನತ್ತ ಪಾರ್ಸೆಲ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ಕಂಟೈನರ್ ಲಾರಿ ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿಗೆ ಢಿಕ್ಕಿ ಹೊಡೆಯಿತು. ಘಟನೆಯಿಂದ ಬಸ್ ಚಾಲಕ ನಾರಾಯಣ ಗೌಡ(53), ಪ್ರಯಾಣಿಕರಾದ ಕಿರಣ (23), ಹಾಸನದ ಬಸವರಾಜು, ಸಕಲೇಶಪುರದ ಪುಷ್ಪಾವತಿ (48), ಮತ್ತಾಕೆಯ ಪುತ್ರಿ ಲತಾ (28), ಚಕ್ರಾವತಿ (40), ತುಮಕೂರಿನ ಪೊಲೀಸ್ ಸಿಬ್ಬಂದಿ ಜಯರಾಮ, ಅಬ್ದುಲ್ ಹಮೀದ್, ಕಬೀರ್, ಮೈಮುನಾ, ಅಬ್ದುರ್ರಹ್ಮಾನ್ ಹಾಗೂ ಲಾರಿ ಚಾಲಕ ತಿಪಟೂರು ನಿವಾಸಿ ಸುರೇಶ್ (32) ಎಂಬವರು ಗಂಭೀರವಾಗಿ ಗಾಯಗೊಂಡು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಘಟನೆಯಿಂದಾಗಿ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಲಾರಿಯ ಚಾಲಕ ಸುರೇಶ್ ಅದರಲ್ಲಿ ಸಿಲುಕಿಕೊಂಡಿದ್ದ. ಕಾಲು ಮುರಿತಕ್ಕೊಳಗಾಗಿ ಸಿಕ್ಕಿ ಹಾಕಿಕೊಂಡ ಆತನನ್ನು ಹೊರತೆಗೆಯಲು ಅಸಾಧ್ಯವಾಗಿ ಸಂಕಷ್ಟಕರ ಸ್ಥಿತಿ ನಿರ್ಮಾಣವಾಗಿತ್ತು. ಸಹಿಸಲಸಾಧ್ಯ ನೋವಿನಿಂದ ತನ್ನ ಜೀವ ರಕ್ಷಿಸಿ ಎಂದು ಗೋಗರೆಯುತ್ತಿದ್ದ ಈತನನ್ನು ರಕ್ಷಿಸಲು ಸ್ಥಳೀಯರು ಗಂಭೀರ ಯತ್ನವನ್ನು ಮಾಡಿದರಾದರೂ, ಮಾನವ ಶ್ರಮದಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ಸಹಾಯದಿಂದ ವಾಹನವನ್ನು ಬೇರ್ಪಡಿಸಿ ಹೊರತೆಗೆಯಲಾಯಿತು. ಕಾಲು ಮುರಿತಕ್ಕೊಳಗಾಗಿ ಅತೀವ ರಕ್ತಸ್ರಾವಕ್ಕೆ ತುತ್ತಾದ ಸುರೇಶನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ, ಸಂಚಾರಿ ಠಾಣಾ ಎಸೈ ನಾಗರಾಜ್ ಮತ್ತವರ ಸಿಬ್ಬಂದಿ ಭಾಗವಹಿಸಿದ್ದರು. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







