ಕಾರ್ಕಳ ಪುರಸಭೆಯ ಮಾಸಿಕ ಸಭೆ

ಕಾರ್ಕಳ, ಜೂ.30: ಕಾರ್ಕಳ ಅಭಿವೃದ್ಧಿಯ ಕುರಿತು ಹಾಗೂ ರಸ್ತೆ ಅಗಲೀಕರಣದ ಸಮಸ್ಯೆಗಳ ಕುರಿತು ಈವರೆಗೆ ಗಮನವೇ ಹರಿಸಿಲ್ಲ. ಜಿಲ್ಲಾಧಿಕಾರಿಗಳಿಗೆ ಕಾರ್ಕಳದಲ್ಲಿ ಏನಾಗುತ್ತಿದೆ ಎಂದೇ ಗೊತ್ತಿಲ್ಲ. ಭೂಸ್ವಾಧೀನಕ್ಕೂ ಅನುಮತಿ ಕೊಡದೇ ಬೇಜವಾಬ್ದಾರಿತನ ಮೆರೆದಿರುವ ಜಿಲ್ಲಾಧಿಕಾರಿಯೇ ಕಾರ್ಕಳ ಬೆಳವಣಿಗೆ ಆಗದಿರಲು ಮೂಲ ಕಾರಣ ಎಂದು ಪ್ರತಿಪಕ್ಷದ ಸದಸ್ಯ ಅಶ್ಪಕ್ ಅಹ್ಮದ್ ಕಿಡಿಕಾರಿದ್ದಾರೆ.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಎಸ್‌ವಿಟಿ ಬಳಿ ಉದ್ಘಾಟನೆಗೊಂಡ ಸೂಪರ್ ಮಾರ್ಕೆಟ್‌ನ ಮಾಲಕರು ಚರಂಡಿ ಕಟ್ಟಿದ್ದಾರೆ. ರಸ್ತೆಯಲ್ಲಿ ಚರಂಡಿ ನಿರ್ಮಿಸಲು ಅವರಿಗೆ ಅನುಮತಿ ಕೊಟ್ಟವರು ಯಾರು? ಎಂದು ಅಶ್ಪಕ್ ಅಹ್ಮದ್ ಸಭೆಯಲ್ಲಿ ಪ್ರಶ್ನಿಸಿದರು. ಮೊಹಮ್ಮದ್ ಶರೀಪ್ ಮಾತನಾಡಿ, ಕಾರ್ಕಳ ಮುಖ್ಯ ರಸ್ತೆಯಲ್ಲೇ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ, ಯಾರೂ ಮಾತನಾಡುವಂತಿಲ್ಲ. ಇಲ್ಲಿ ಟ್ರೇಡ್ ಲೈಸೆನ್ಸ್ ಬದಲು, ರೋಡ್ ಲೈಸೆನ್ಸ್ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಹಲವು ಬಾರಿ ಜಾಗದ ಮಾಲಕರನ್ನು ಮನವೊಲಿಸಲು ನಡೆಸಿದ ಪ್ರಯತ್ನಗಳ ವಿಫಲತೆಯನ್ನು ಸಭೆಗೆ ವಿವರಿಸಿದರು.
ಮೂರು ಮಾರ್ಗದ ಬಳಿಯ ಜ್ಯುವೆಲ್ಲರಿ ಮಾಲಕರು ಅಂದು ಸ್ಥಳಕ್ಕೆ ತೆರಳಿದ್ದ ಸಂದರ್ಭ ಒಂದು ತಿಂಗಳೊಳಗಾಗಿ ಜಾಗ ಬಿಟ್ಟುಕೊಡುವುದಾಗಿ ತಿಳಿಸಿದ್ದರು. ಬಳಿಕ ಪೊಲೀಸ್ ಇಲಾಖೆ ಹಾಗೂ ನ್ಯಾಯವಾದಿಗಳ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾದರೆ ಹೇಗೆ ರಸ್ತೆ ಅಗಲೀಕರಣ ನಡೆಸುವುದು ಎಂದು ಪ್ರಶ್ನಿಸಿದರು. ಇನ್ನಾದರೂ ಸದಸ್ಯರು ಸಹಕಾರ ಕೊಟ್ಟು ಬೆಂಬಲಿಸಬೇಕು ಎಂದವರು ಕೋರಿದರು.
ಜು.7ರಂದು ಮತ್ತೆ ಎಲ್ಲರ ಸಮ್ಮುಖದಲ್ಲಿ ಮನವೊಲಿಸುವ ಪ್ರಯತ್ನ ನಡೆಸೋಣ ಎಂದರು. ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಸೊಳ್ಳೆಗಳನ್ನು ನಾಶಪಡಿಸುವ ಸೊಳ್ಳೆ ನಾಶಕಗಳನ್ನು ಸಂಬಂಧಿತ ಪ್ರದೇಶಗಳಲ್ಲಿ ಸಿಂಪಡಿಸುವ ಕಾರ್ಯ ನಡೆಯಬೇಕು ಎಂದರು. ರಾಯಪ್ಪ ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆ ಜೊತೆ ಮಾತುಕತೆ ನಡೆಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಆಳ್ವಾಸ್ ವಿದ್ಯಾರ್ಥಿಗಳನ್ನು ಕರೆಸಿ ಪ್ರತಿ ಮನೆ ಮನೆಗೆ ತೆರಳಿ ಶುಚಿತ್ವ ಹಾಗೂ ಅದರ ಅರಿವು ಮೂಡಿಸುವಂತೆ ಮಾಡಲಾಗಿದೆ ಎಂದು ಉತ್ತರಿಸಿದರು. ಎರಡು ದಿನಗಳಿಂದ ಬಹಳ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಸಿಂಪಡಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಾಬೆಟ್ಟು ಪರಿಸರದಲ್ಲಿ ಚರಂಡಿ ನೀರು ರಸ್ತೆಗಿಳಿಯುತ್ತಿದೆ. ಪಕ್ಕದಲ್ಲಿಯೇ ಇರುವ ಪಾರ್ಕ್ ಕೆರೆಯಂತೆ ಕಾಣಿಸುತ್ತಿದೆ ಎಂದು ಪುರಸಭಾ ವಿಪಕ್ಷ ಸದಸ್ಯೆ ರೆಹಮತ್ ಶೇಖ್ ಆರೋಪಿಸಿದರು.
ಸದಸ್ಯ ಮುಹಮ್ಮದ್ ಶರೀಫ್ ಮಾತನಾಡಿ, ಕಾರ್ಕಳ ಸುತ್ತಮುತ್ತಲಿನ ಹೋಟೆಲ್‌ಗಳಿಗೆ ದಾಳಿ ಮಾಡಿ ಶುಚಿತ್ವ ಕಾಪಾಡದ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುರಿದ ಭಾರೀ ಮಳೆಗೆ ರಸ್ತೆಯಲ್ಲೇ ನೀರು ತುಂಬಿಕೊಳ್ಳುತ್ತಿದೆ. ಮಣ್ಣಗೋಪುರ ಗೋಪಾಲ್ ಟವರ್ಸ್ ಬಳಿ ನೀರು ತುಂಬಿದ್ದರೆ, ಕಾರ್ಪೋರೇಶನ್ ಬ್ಯಾಂಕ್ ಬಳಿ ಉಂಟಾದ ಹೊಂಡ ಅಪಾಯವನ್ನು ಸೂಚಿಸುತ್ತಿದೆ. ಕಾಳಿಕಾಂಬ ಪರಿಸರದಲ್ಲಿ ಕಳೆದ ಆರು ದಿನಗಳಿಂದ ವಿದ್ಯುತ್ ಇಲ್ಲ. ಶಾಲಾ ಮಕ್ಕಳ ಮುನ್ನೆಚ್ಚರಿಕೆ ಕುರಿತು ನಡೆಸುವ ಸಭೆಗೆ ತಹಶೀಲ್ದಾರ್ ನಗರದ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ ಎಂದು ಪ್ರಕಾಶ್ ರಾವ್ ದೂರಿದರು.
ಕಾಬೆಟ್ಟು ಬಳಿಯಿರುವ ತ್ಯಾಜ್ಯ ವಿಲೇವಾರಿ ಘಟಕದ ಬಳಿ ದೊಡ್ಡ ಗಾತ್ರದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಭಯವನ್ನು ಹುಟ್ಟಿಸುತ್ತಿವೆ. ಒಳಚರಂಡಿ ಯೋಜನೆಗೆ ಬರುವ ಅನುದಾನದ ಪೈಕಿ ಸ್ವಲ್ಪ ಅನುದಾನವನ್ನು ಈ ಪ್ರದೇಶಕ್ಕೆ ಮೀಸಲಿಟ್ಟು ಸಣ್ಣಪುಟ್ಟ ಕಾಮಗಾರಿ ನಡೆಸಿ ಎಂದು ನಳಿನಿ ಆಚಾರ್ಯ ತಿಳಿಸಿದರು.
ಕಾರ್ಕಳ ನಗರದಲ್ಲಿ ಕೆಲ ಪ್ರದೇಶಗಳು ಹೊಂಡಮಯವಾಗಿವೆ. ಅವುಗಳಲ್ಲಿ ನೀರು ತುಂಬಿ ಬೈಕು ಸವಾರರು ಬಿದ್ದು ಅವಘಡಗಳಾದ ಘಟನೆಗಳು ನಡೆಯುತ್ತಿದೆ. ಆದರೂ ಪುರಸಭೆಯು ಹೊಂಡ ಗುಂಡಿಗಳಿಗೆ ಮುಕ್ತಿ ಕಾಣಿಸುವತ್ತ ಗಮನಹರಿಸುತ್ತಿಲ್ಲ ಎಂದು ಪ್ರತಿ ಪಕ್ಷದ ಸದಸ್ಯ ಶುಭದಾ ರಾವ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರಾಯಪ್ಪ, ಕೂಡಲೇ ರಸ್ತೆಗಳಿಗೆ ಪ್ಯಾಚ್ ವರ್ಕ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಬಂಡೀಮಠ ಬಸ್ಸು ನಿಲ್ದಾಣ ಸಮಾನ ಬಳಕೆಯ ಬಗ್ಗೆ ಕಾರ್ಕಳ ಎಎಸ್ಪಿ ನೇತೃತ್ವದಲ್ಲಿ ಸಭೆ ನಡೆಸಿ ವರದಿಯನ್ನು ಕಳುಹಿಸಲಾಗಿದೆ. ಮುಂದೆ ಆರ್‌ಟಿಒ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದಾಗ, ಮುಹಮ್ಮದ್ ಶರೀಫ್ ಮಾತನಾಡಿ, ಮುಖ್ಯಾಧಿಕಾರಿಗಳು ವರದಿ ನೀಡುವುದು, ಪತ್ರ ಮೂಲಕ ವ್ಯವಹರಿಸುವುದು ಇವೆಲ್ಲಾ ವಾಮೂಲಿಯಾಗಿ ಬಿಟ್ಟಿದೆ. ಆದರೆ ಅಧಿಕಾರಿಗಳು ಕ್ರಮಕೈಗೊಳ್ಳುವುದಿಲ್ಲ. ಅಧಿಕಾರಿಗಳು ನ್ಯಾಯಾಲಯಕ್ಕೆ ಸುಳ್ಳು ಅಫಿದಾವಿತ್ ಸಲ್ಲಿಸಿ, ಮೋಸ ಮಾಡಿದ್ದಾರೆ ಎಂದು ದೂರಿದರು. ಪ್ರಕಾಶ್ ರಾವ್ ಮಾತನಾಡಿ, ಬಂಡೀಮಠ ಬಸ್ಸು ನಿಲ್ದಾಣ ಬಳಕೆಯಾಗಬೇಕು ಎಂದು ಸಹಮತ ಸೂಚಿಸಿದರು. ಉಪಾಧ್ಯಕ್ಷ ಗಿರಿಧರ್ ನಾಯಕ್ ಮಾತನಾಡಿ, ಬೆಂಗಳೂರು ಬಸ್ಸುಗಳು ರಸ್ತೆಯಲ್ಲೇ ನಿಂತು ತೊಂದರೆ ನೀಡುವುದರ ಬಗ್ಗೆ ಆಕ್ಷೇಪಿಸಿದರು.
ಪುರಸಬೆ ಮುಖ್ಯಾಧಿಕಾರಿ ರಾಯಪ್ಪ ನಂಬರ್ 1 ಅಧಿಕಾರಿ. ನಿಮ್ಮ ಸೇವೆಗೆ ನಾವು ಚಿರಋಣಿಗಳು. ಯಾವುದೇ ಜನರ ಸಮಸ್ಯೆ ಬಂದಲ್ಲಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುತ್ತಿದ್ದು ತಮ್ಮಲ್ಲಿ ಸಾದ್ಯವದಷ್ಟು ಜನ ಸಾಮಾನ್ಯರಿಗೆ ನ್ಯಾಯಕೊಡಿಸುವಲ್ಲಿ ಪ್ರಯತ್ನಿಸುತ್ತಿದ್ದೀರಿ ಎಂದು ಸಭೆಯಲ್ಲಿ ಅಶ್ಪಕ್ ಅಹ್ಮದ್ ಶ್ಲಾಘಿಸಿದರು.
ಪುರಸಬೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.







