ಸ್ವಿಸ್ ಬ್ಯಾಂಕ್‌ಗಳಲ್ಲಿನ ಭಾರತೀಯರ ಹಣದಲ್ಲಿ ಶೇ.33ರಷ್ಟು ಕುಸಿತ

ಜ್ಯೂರಿಕ್,ಜೂ.30: ಸ್ವಿಸ್ ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ಗಳಲ್ಲಿ ಭಾರತೀಯರು ಶೇಖರಿಸಿಟ್ಟಿರುವ ಕಪ್ಪು ಹಣದ ಮೊತ್ತವು ಕಳೆದ ವರ್ಷ ಶೇ.33ರಷ್ಟು ಕುಸಿದಿದ್ದು, 1.2 ಬಿಲಿಯ ಫ್ರಾಂಕ್ (ಸುಮಾರು 8,392 ಕೋಟಿ ರೂ.)ಗಳ ದಾಖಲೆಯ ಇಳಿಕೆಯನ್ನು ಕಂಡಿದೆ.
ಸ್ವಿಝರ್‌ಲ್ಯಾಂಡ್‌ನ ಕೇಂದ್ರೀಯ ಬ್ಯಾಂಕಿಂಗ್ ಪ್ರಾಧಿಕಾರವಾದ ಎಸ್‌ಎನ್‌ಬಿ ಬಹಿರಂಗಪಡಿಸಿರುವ ಅಂಕಿಅಂಶಗಳ ಪ್ರಕಾರ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಹಣವು 2015ರ ಅಂತ್ಯದ ವೇಳೆಗೆ 596.42 ಮಿಲಿಯ ಸ್ವಿಸ್ ಫ್ರಾಂಕ್‌ಗಳಷ್ಟು ಕುಸಿದಿದ್ದು, 1217.6 ಮಿಲಿಯ ಸ್ವಿಸ್ ಫ್ರಾಂಕ್‌ನಷ್ಟಾಗಿದೆ. ತನ್ನ ಬ್ಯಾಂಕ್‌ಗಳಲ್ಲಿ ವಿವಿಧ ದೇಶಗಳ ಪ್ರಜೆಗಳು ಇರಿಸಿರುವ ಸಂಪತ್ತಿನ ವಿವರಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆಯನ್ನು ಸ್ವಿಝರ್‌ಲ್ಯಾಂಡ್ 1997ರಲ್ಲಿ ಮೊದಲ ಬಾರಿಗೆ ಆರಂಭಿಸಿತ್ತು. ಸತತ ಎರಡನೆ ವರ್ಷವೂ ಸ್ವಿಸ್‌ಬ್ಯಾಂಕ್‌ಗಳಲ್ಲಿ ಭಾರತೀಯರು ಶೇಖರಿಸಿಟ್ಟ ಹಣದ ಮೊತ್ತದಲ್ಲಿ ಇಳಿಕೆಯಾಗಿದೆ. ಸ್ವಿಸ್‌ಬ್ಯಾಂಕ್‌ಗಳಲ್ಲಿ ಭಾರತೀಯರ ಸಂಗ್ರಹಿಸಿರುವ ಒಟ್ಟು ಸಂಪತ್ತಿನ ಮೊತ್ತವು 2006ರಲ್ಲಿ 6.5 ಶತಕೋಟಿ ಡಾಲರ್‌ಗಳಾಗಿದ್ದು, ದಾಖಲೆ ಏರಿಕೆಯನ್ನು ಕಂಡಿತ್ತು.
ಆದಾಗ್ಯೂ,ಆನಂತರ ಈ ನಿಧಿಗಳ ಪ್ರಮಾಣವು 2011 ಹಾಗೂ 2013ನೆ ಇಸವಿಯನ್ನು ಹೊರತುಪಡಿಸಿ, ಉಳಿದ ವರ್ಷಗಳಲ್ಲಿ ಸತತವಾಗಿ ಇಳಿಕೆಯಾಗುತ್ತಲೇ ಬಂದಿದೆ. 2015ರ ಕೊನೆಯಲ್ಲಿ ಭಾರತೀಯರು ಸ್ವಿಸ್‌ಬ್ಯಾಂಕ್‌ಗಳಲ್ಲಿ ಕೂಡಿಟ್ಟ ಹಣದ ಒಟ್ಟು ಮೊತ್ತವು 1,206.71 ದಶಲಕ್ಷ ಸ್ವಿಸ್ ಫ್ರಾಂಕ್‌ಗಳಾಗಿತ್ತು.
ಗ್ರಾಹಕ ಉಳಿತಾಯಗಳು ಹಾಗೂ ಠೇವಣಿ ಖಾತೆಗಳ ಮೂಲಕ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಸಂಚಯಿಸಿದ ನಿಧಿಗಳ ವೌಲ್ಯವು 2015ರಲ್ಲಿ 425.8 ಮಿಲಿಯ ಸ್ವಿಸ್ ಫ್ರಾಂಕ್‌ಗಳಿಗೆ ಕುಸಿದಿದೆ.ಆದರೆ ಶೇರುಗಳು ಮೂಲಕ ಭಾರತೀಯರು ಹೊಂದಿರುವ ಹಣದ ವೌಲ್ಯವು 297 ಮಿಲಿಯ ಸ್ವಿಸ್ ಫ್ರಾಂಕ್‌ಗಳಿಂದ 510.4 ಮಿಲಿಯ ಸ್ವಿಸ್ ಫ್ರಾಂಕ್‌ಗಳಿಗೆ ಏರಿದೆ.
ತಮ್ಮ ದೇಶದ ಪ್ರಜೆಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪು ಹಣದ ಬಗ್ಗೆ ಭಾರತ ಮತ್ತಿತರ ರಾಷ್ಟ್ರಗಳು ಸ್ವಿಸ್ ಸರಕಾರಕ್ಕೆ ಬಲವಾದ ಸಾಕ್ಷಗಳನ್ನು ಒದಗಿಸಿದ ಬಳಿಕ ಅಲ್ಲಿನ ಕೇಂದ್ರೀಯ ಬ್ಯಾಂಕ್ ಆದ ಎಸ್‌ಎನ್‌ಬಿ, ತನ್ನ ವಿದೇಶಿ ಗ್ರಾಹಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ.







