ವರಿಷ್ಠರಿಗೆ ದೂರು ನೀಡಲು ಬಿಜೆಪಿ ಭಿನ್ನರ ಸಿದ್ಧತೆ

ಬೆಂಗಳೂರು, ಜೂ.30: ಪದಾಧಿಕಾರಿಗಳ ನೇಮಕದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಭಿನ್ನಮತ ಉಲ್ಬಣಿಸಿದ್ದು, ಬಿ.ಎಸ್.ಯಡಿಯೂರಪ್ಪ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಲು ಭಿನ್ನ ಮುಖಂಡರು ಸಿದ್ಧತೆ ನಡೆಸಿದ್ದಾರೆ.
ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರಿಗಷ್ಟೇ ಆದ್ಯತೆ ನೀಡಿದ್ದು, ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಮೇಲ್ಮನೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿ ಹಲವು ಮುಖಂಡರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈಶ್ವರಪ್ಪ ಸೇರಿದಂತೆ ಭಿನ್ನಮತೀಯ ಮುಖಂಡರು ಹೊಸದಿಲ್ಲಿಗೆ ತೆರಳಲು ಬಿಜೆಪಿ ರಾಷ್ಟ್ರೀಯಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಭೇಟಿಗೆ ತೀರ್ಮಾನಿಸಿದ್ದಾರೆ. ಹೀಗಾಗಿ ಪಕ್ಷದಲ್ಲಿ ಭಿನ್ನಮತ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಗಳು ನಿಚ್ಚಳವಾಗಿದೆ. ಈ ಮಧ್ಯೆಯೇ ‘ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಬಿಎಸ್‌ವೈ ಖಡಕ್ ಸ್ಪಷ್ಟಣೆ ಭಿನ್ನರನ್ನು ಮತ್ತಷ್ಟು ಕೆರಳಿಸಿದೆ.
ಈಗಾಗಲೇ ಕೆ.ಎಸ್.ಈಶ್ವರಪ್ಪಹೊಸದಿಲ್ಲಿ ನಾಯಕರನ್ನು ಸಂಪರ್ಕಿಸಿ ಭೇಟಿಗೆ ಸಮಯ ಕೋರಿದ್ದು, ವರಿಷ್ಠರ ಸಮಯ ದೊರೆತರೆ ನಾಳೆ ಅಥವಾ ನಾಡಿದ್ದು ಹೊಸದಿಲ್ಲಿಗೆ ತೆರಳುವ ಸಾಧ್ಯತೆಗಳಿವೆ. ಈ ಮಧ್ಯೆ ‘ಪಕ್ಷದ ಪದಾಧಿಕಾರಿಗಳ ನೇಮಕ ಸೇರಿದಂತೆ ಯಾವುದೇ ಬೆಳವಣಿಗೆಗಳಲ್ಲಿ ತನ್ನ ಹಸ್ತಕ್ಷೇಪ ಇಲ್ಲ’ ಎಂದು ಪ್ರಧಾನ ಕಾರ್ಯದರ್ಶಿ ಶೋಭಾ ಸ್ಪಷ್ಟಣೆ ನೀಡಿದ್ದು, ಭಿನ್ನರನ್ನು ಅದನ್ನು ಕೇಳಿಸಿಕೊಳ್ಳಲು ಸಿದ್ಧರಿಲ್ಲ.







