ಅಕ್ರಮ ದನ ಸಾಗಾಟ ಮಾಡಿ ಸಿಕ್ಕಿಬಿದ್ದ ಬಿಜೆಪಿ ಕಾರ್ಪೊರೇಟರ್!

ಮಂಗಳೂರು, ಜೂ.30: ದನವನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದರೆನ್ನಲಾದ ಬಿಜೆಪಿ ಕಾರ್ಪೊರೇಟರ್ ಹಾಗೂ ಮುಖಂಡರೊಬ್ಬರು ಸಂಘಪರಿವಾರದ ಕಾರ್ಯಕರ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಸುರತ್ಕಲ್ ಸಮೀಪದ ಕೃಷ್ಣಾಪುರ 4ನೆ ವಾರ್ಡ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೃಷ್ಣಾಪುರ 4ನೆ ವಾರ್ಡ್‌ನಲ್ಲಿ ಶನಿವಾರ ರಾತ್ರಿ ದನ ಕಳವು ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದು, ಈ ಪೈಕಿ ಓರ್ವ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಆಗಿದ್ದರೆನ್ನಲಾಗಿದ್ದು, ಇನ್ನೋರ್ವ ಬಿಜೆಪಿ ಸ್ಥಳೀಯ ಮುಖಂಡನೆಂದು ಹೇಳಲಾಗಿದೆ.
ಬಿಜೆಪಿ ಮುಖಂಡ ಹಾಗೂ ಕಾರ್ಪೊರೇಟರ್ ಇಬ್ಬರೂ ಶನಿವಾರ ರಾತ್ರಿ ಸ್ಕಾರ್ಪಿಯೊ ಕಾರಿನಲ್ಲಿ ಆಗಮಿಸಿ ಕೃಷ್ಣಾಪುರದಲ್ಲಿ ದನವೊಂದನ್ನು ಕಟ್ಟಿಹಾಕಿ ಅಕ್ರಮವಾಗಿ ಸ್ಕಾರ್ಪಿಯೊದಲ್ಲಿ ಕೂಡಿ ಹಾಕಿದ್ದರೆನ್ನಲಾಗಿದೆ. ಬಳಿಕ ಸ್ವಲ್ಪ ದೂರದಲ್ಲಿ ಇನ್ನೊಂದೆಡೆ ದನವನ್ನು ಕಳವು ಮಾಡುತ್ತಿದ್ದಾಗ ಮನೆಯವರು ಎಚ್ಚೆತ್ತಿದ್ದಾರೆ. ಕೂಡಲೇ ಅವರು ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸಂಘಪರಿವಾರದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದಾಗ ಬಿಜೆಪಿ ಮುಖಂಡ ಹಾಗೂ ಕಾರ್ಪೊರೇಟರ್ ಇಬ್ಬರೂ ಅವರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಅವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡಾಗ ಅವರು ಬಿಜೆಪಿ ಮುಖಂಡರೆಂದು ತಿಳಿದಾಗ ಸಂಘ ಪರಿವಾರದ ಕಾರ್ಯಕರ್ತರಿಗೆ ಅಚ್ಚರಿಗೊಂಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಅವರೊಂದಿಗೆ ತಮ್ಮನ್ನು ಬಿಡುವಂತೆ ಹಾಗೂ ಸುದ್ದಿಯನ್ನು ಬಹಿರಂಗಪಡಿಸದಂತೆ ಅಂಗಲಾಚಿದ್ದಾರೆ ಎಂದು ಹೇಳಲಾಗಿದೆ.







