ಅನರ್ಹರ ಬಿಪಿಎಲ್ ಕಾರ್ಡ್ ಒಂದು ತಿಂಗಳೊಳಗೆ ರದ್ದು
ಕೊಡಗು ಜಿಪಂ ಸಾಮಾನ್ಯ ಸಭೆ

ಮಡಿಕೇರಿ, ಜೂ.30: ಮುಂದಿನ ಒಂದು ತಿಂಗಳೊಳಗೆ ಅನರ್ಹರ ಬಳಿ ಇರುವ ಬಿಪಿಎಲ್ ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು ರದ್ದು ಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಪಿಎಲ್ ಕಾರ್ಡ್ ಕುರಿತು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ಸರೋಜಮ್ಮ, ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದಿದ್ದರೂ ನೂತನ ಬಿಪಿಎಲ್ ಕಾರ್ಡ್‌ಗಳು ಸಿಗದಿರುವ ಬಗ್ಗೆ ಪ್ರಸ್ತಾಪಿಸಿದರು. ಬಡವರು 1 ರೂ. ಅಕ್ಕಿಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್, ಬಿಪಿಎಲ್ ಕಾರ್ಡ್ ಪಡೆಯಲು ಇಲ್ಲಿಯವರೆಗೆ ಸರಕಾರ 14 ಮಾನದಂಡಗಳನ್ನು ಆಧಾರವಾಗಿರಿಸಿಕೊಳ್ಳುತ್ತಿತ್ತು. ಆದರೆ, ಇದೀಗ ನೂತನ ನೀತಿ ಜಾರಿಗೆ ಬರಲಿದ್ದು, 4 ಮಾನದಂಡಗಳು ಮಾತ್ರ ಸಾಕೆಂದು ಸ್ಪಷ್ಟಪಡಿಸಿದರು. ಹೊಸ ಆದೇಶ ಬಂದ ನಂತರ ನೂತನ ಕಾರ್ಡ್‌ಗಳ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿದೇಶದಲ್ಲಿರುವ ಶ್ರೀಮಂತರಿಗೂ ಬಿಪಿಎಲ್ ಕಾರ್ಡ್:
ಇದೇ ಸಂದರ್ಭ ಇತರ ಸದಸ್ಯರು ಆಹಾರ ಇಲಾಖೆಯ ಅವ್ಯವಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ವಿದೇಶದಲ್ಲಿರುವ ಶ್ರೀಮಂತರಿಗೂ, ತೋಟದ ಮಾಲಕರಿಗೂ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗಿದೆಯೆಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್, ತಾವು ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲು ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂದರು. ಸರಕಾರದ ಆದೇಶದಂತೆ ಸರ್ವೇ ನಡೆಸಿ 3,072 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಿರುವುದಾಗಿ ಮಾಹಿತಿ ನೀಡಿದರು. ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಿರುವುದಾಗಿ ಅಧಿಕಾರಿಯೆ ಒಪ್ಪಿಕೊಂಡಿರುವ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯ ಪೃಥ್ವಿ, ಒತ್ತಾಯಿಸಿದರು. ಸೋಮವಾರಪೇಟೆ ತಾಲೂಕಿನಲ್ಲಿ ಆಹಾರ ನಿರೀಕ್ಷಕರೊಬ್ಬರು ಹಣ ನೀಡಿದವರಿಗೆ ಮಾತ್ರ ಕಾರ್ಡ್ ನೀಡುತ್ತಿದ್ದಾರೆ. ಇವರನ್ನು ಅಮಾನತುಗೊಳಿಸಲು ನಿರ್ಣಯಗಳಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಶ್ರೀನಿವಾಸ್‌ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಉಪನಿರ್ದೇಶಕ ಚಂದ್ರಕಾಂತ್ ನಾಯಕ್, ಈ ಆಹಾರ ನಿರೀಕ್ಷಕರನ್ನು ಎರಡು ಬಾರಿ ಅಮಾನತು ಮಾಡಲಾಗಿತ್ತು. ಆದರೆ, ಮತ್ತೆ ಇವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಿರೀಕ್ಷಕರ ವಿರುದ್ಧ ತಹಶೀಲ್ದಾರ್ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಜಿಲ್ಲಾಧಿಕಾರಿಗಳು ಅಮಾನತ್ತಿನ ಆದೇಶ ಮಾಡಿದರೂ ಮತ್ತೆ ಅವರು ಕರ್ತವ್ಯದಲ್ಲಿ ಮುಂದುವರಿದಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ತಕ್ಷಣ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಕಾರ್ಡ್ಸ್ ಆಡ್ತಾರೆ:
ಸಭೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಾಸ್ಟೆಲ್‌ಗಳ ಅವ್ಯವಸ್ಥೆ ಬಗ್ಗೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು. ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದರಿಂದ ವಿದ್ಯಾರ್ಥಿಗಳು ತಮ್ಮಷ್ಟಕ್ಕೆ ತಾವು ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಹಾಸ್ಟೆಲ್‌ಗಳ ಅವ್ಯವಸ್ಥೆ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖಾಧಿಕಾರಿ ಗಲಗಲಿ, ವಿದ್ಯಾರ್ಥಿಗಳನ್ನು ಅಡುಗೆಯವರು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟೀಕರಣ ನೀಡಿದರು. ಇದರಿಂದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಶ್ರೀನಿವಾಸ್ ಮಾತನಾಡಿ, ವಾರ್ಡನ್‌ಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಈ ಸಂದಭರ್ ಮಾತನಾಡಿದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ್ ಜಿಲ್ಲೆಯಲ್ಲಿ ವಾರ್ಡನ್‌ಗಳ ಕೊರತೆ ಇದೆ. ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ತಾತ್ಕಾಲಿಕ ವಾರ್ಡನ್‌ಗಳ ನೇಮಕಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು.
ಎಲ್‌ಕೆಜಿ, ಯುಕೆಜಿ ಪ್ರಯೋಗಕ್ಕೆ ಆಕ್ಷೇಪ:
ಗೋಣಿಕೊಪ್ಪಲಿನ ಸರಕಾರಿ ಶಾಲೆಯೊಂದರಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಸದಸ್ಯೆ ಕೆ.ಪಿ.ಚಂದ್ರಕಲಾ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ತರಗತಿ ಆರಂಭಿಸಲು ಸರಕಾರದ ಅನುಮತಿ ಇಲ್ಲದಿದ್ದರೂ ಇದಕ್ಕೆ ಅವಕಾಶ ನೀಡಿರುವುದು ಸರಿಯಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಉಪನಿರ್ದೇಶಕ ಬಸವರಾಜು ಮಾತನಾಡಿ, ಪ್ರಾಯೋಗಿಕವಾಗಿ ಈ ತರಗತಿಗಳನ್ನು ಆರಂಭಿಸಲಾಗಿದ್ದು, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ತಮ್ಮ ಗಮನಕ್ಕೆ ತಂದಿಲ್ಲವೆಂದು ತಿಳಿಸಿದರು. ಈ ಸಂದರ್ಭ ಕೆಲವು ಸದಸ್ಯರು ಎಲ್‌ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಿರುವುದು ಸರಕಾರಿ ನಿಯಮಕ್ಕೆ ವಿರುದ್ಧವಾಗಿರುವುದರಿಂದ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ವಡೆ, ಜಾಮೂನ್ ತಿನ್ನೋದಕ್ಕಾಗಿ ಸಭೆಗೆ ಬರಬೇಕಾ: ಕಳೆದ ಸಭೆಯಲ್ಲಿ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯವಾಗಿದ್ದರೂ ಇದನ್ನು ಸರಕಾರಕ್ಕೆ ಕಳುಹಿಸಿಲ್ಲವೆಂದು ಸದಸ್ಯೆ ಸರಿತಾ ಪೂಣಚ್ಚ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಯಾವುದೇ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲವೆಂದು ಟೀಕಿಸಿದ ಅವರು, ವಡೆ, ಜಾಮೂನ್ ತಿನ್ನುವುದಕ್ಕಾಗಿ ಸಭೆಗೆ ಬರಬೇಕೆ ಎಂದು ಪ್ರಶ್ನಿಸಿದರು. ಕರಿಕೆ ಶಾಲೆಯ ಮುಖ್ಯ ಶಿಕ್ಷಕರನ್ನು ಮುಂದಿನ 15 ದಿನಗಳಲ್ಲಿ ಅಮಾನತುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ಭರವಸೆ ನೀಡಿದರು. ಮುಖ್ಯ ಶಿಕ್ಷಕರ ಕರ್ತವ್ಯ ಲೋಪದ ಬಗ್ಗೆ ಸದಸ್ಯೆ ಕವಿತಾ ಪ್ರಭಾಕರ್ ಸಭೆೆಯ ಗಮನ ಸೆಳೆದರು.
ಸದಸ್ಯ ಲತೀಫ್ ಮಾತನಾಡಿ, ದುಬಾರೆಯಲ್ಲಿ ರ್ಯಾಫ್ಟಿಂಗ್‌ನ್ನು ನಂಬಿಕೊಂಡು ದುರ್ಬಲ ವರ್ಗದ 150 ಕುಟುಂಬಗಳು ಜೀವನ ಸಾಗಿಸುತ್ತಿದ್ದು, ರ್ಯಾಫ್ಟಿಂಗ್‌ಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು. ಕಟ್ಟೆಹಾಡಿ ವ್ಯಾಪ್ತಿಯಲ್ಲಿ ಆದಿವಾಸಿ ಹಕ್ಕು ಮಸೂದೆಯಡಿ ಸರ್ವೇ ಕಾರ್ಯ ನಡೆಸಿ ಮೂರು ವರ್ಷ ಕಳೆದಿದ್ದರೂ ಇಲ್ಲಿಯವರೆಗೆ ಹಕ್ಕು ಪತ್ರ ನೀಡಿಲ್ಲ. ಮಳೆಗಾಲದ ಸಂದರ್ಭದಲ್ಲಿ ಗಿರಿಜನರಿಗೆ ಅಗತ್ಯವಿರುವ ಸೌಲಭ್ಯವನ್ನು ನೀಡಿಲ್ಲವೆಂದು ಆರೋಪಿಸಿದರು. ಇವರ ಟೀಕೆಗೆ ಧ್ವನಿಗೂಡಿಸಿದ ಇತರ ಸದಸ್ಯರು ಕೂಡ ಕೊಡಗು ಜಿಲ್ಲೆಯಾದ್ಯಂತ ಹಕ್ಕುಪತ್ರದ ಹಂಚಿಕೆ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪರಿಷತ್‌ಗೆ ಆಯ್ಕೆ: ಸಭೆೆಯಲ್ಲಿ ರಾಜ್ಯ ಪರಿಷತ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹಾಗೂ ಪಾಲಿಬೆಟ್ಟ ಗ್ರಾಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಜಿಪಂಸ್ಥಾಯಿ ಸಮಿತಿಗಳನ್ನು ಸದ್ಯದಲ್ಲೆ ರಚಿಸಲಾಗುವುದೆಂದು ಅಧ್ಯಕ್ಷ ಬಿ.ಎ.ಹರೀಶ್ ಇದೇ ಸಂದರ್ಭ ತಿಳಿಸಿದರು. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಉಪ ಕಾರ್ಯದರ್ಶಿ ತಾಕತ್ ರಾವ್ ಉಪಸ್ಥಿತರಿದ್ದರು.







