ಗ್ರಾಪಂ ಕಚೆೇರಿಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು
ಸಾಮಾಜಿಕ ತಪಾಸಣಾ ಸಭೆೆಗೆ ಅಧಿಕಾರಿಗಳು ಗೈರು
ಸೊರಬ, ಜೂ.30: ನಿಗದಿತ ಸಮಯಕ್ಕೆ ಸರಿಯಾಗಿ ನೋಡಲ್ ಅಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿ ಸಭೆಗೆ ಹಾಜರಾಗದ ಕಾರಣ ನಡೆಯಬೇಕಾಗಿದ್ದ ಸಾಮಾಜಿಕ ತಪಾಸಣೆ ಸಭೆೆ ನಡೆಯದೆ ಗ್ರಾಮಸ್ಥರು ಗ್ರಾಪಂ ಕಚೆೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಹಳೆಸೊರಬ ಗ್ರಾಪಂ ಕಚೇರಿಯಲ್ಲಿ ಗುರುವಾರ ನಡೆದಿದೆ.
2016-2017 ನೆ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆಯ 1ನೆ ಸುತ್ತಿನ ಸಾಮಾಜಿಕ ತಪಾಸಣೆಯ ಸಭೆ ಗುರುವಾರ ಹಳೇಸೊರಬ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು. ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆೆಗೆ ಯಾವುದೇ ಅಧಿಕಾರಿಗಳು ಬಾರದೇ ಇರುವ ಕಾರಣದಿಂದ ಸಭೆಗೆ ಆಗಮಿಸಿದ್ದ ಗ್ರಾಪಂ ಸದಸ್ಯರು ಮತ್ತು ಗ್ರಾಮದ ಮುಖಂಡರು ಆಕ್ರೋಶಗೊಂಡರು
ಸಭೆಗೆ ಆಗಮಿಸಿದ್ದ ಮಾಜಿ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ಪಂಚಾಯತ್ತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರೇಡ್ 1 ಕಾರ್ಯದರ್ಶಿಗಳು ಇಲ್ಲ. ಹಂಗಾಮಿಯಾಗಿ ನೇಮಕಗೊಂಡವರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ತಾಲೂಕಿನಲ್ಲಿ ಆನವಟ್ಟಿ ಹೊರತುಪಡಿಸಿದರೇ ಅತ್ಯಂತ ದೊಡ್ಡ ಗ್ರಾಪಂ ಹಳೇಸೊರಬ ಆಗಿದೆ. ಆದಾಯದಲ್ಲಿಯೋ ಮೊದಲನೆಯ ಸ್ಥಾನದಲ್ಲಿದೆ. ಗ್ರಾಪಂ ಚುನಾವಣೆಯ ನೀತಿ ಸಂಹಿತೆ ಸಮಯದಲ್ಲಿಯೆ ಹಂಗಾಮಿಯಾಗಿ ನೇಮಕಗೊಂಡಿದ್ದ ಅಧಿಕಾರಿಯನ್ನು ವರ್ಗಾವಣೆಗೊಳಿಸಲಾಗಿದೆ. ಗ್ರಾಪಂನಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ದೂರಿದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳಿಗೆ ಕಾದ ಸಭೆಯ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೀಗ ಜಡಿದು ಪ್ರತಿಭಟಿಸುತ್ತಿದ್ದಾಗ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸರೋಜಮ್ಮ, ಗ್ರಾಪಂ ಸದಸ್ಯರಾದ ಮೊಹನ್, ಅರುಣ ಸೇರಿದಂತೆ ಬಹುತೇಕ ಸದಸ್ಯರು ಕರಡಿಗೇರಿ ಮಂಜಪ್ಪ, ಕುದುರೆಗಣಿ ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.







