ಬರಗಾಲಕ್ಕೆ ತುತ್ತಾದ ಗ್ರಾಮಗಳಿಗೆ ಮಂಜೂರಾಗದ ಬೆಳೆ ವಿಮೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ.ವೈ.ರಾಘವೇಂದ್ರ ಆಕ್ರೋಶ

ಶಿವಮೊಗ್ಗ, ಜೂ.30: ಜಿಲ್ಲೆಯ ಶಿಕಾರಿಪುರ ಸೇರಿದಂತೆ ಇತರೆ ತಾಲೂಕುಗಳಲ್ಲಿನ ಹಲವು ಗ್ರಾಮಗಳು ಭೀಕರ ಬರಗಾಲಕ್ಕೆ ತುತ್ತಾಗಿ ಬೆಳೆ ನಷ್ಟವಾದರೂ ಕೂಡ ಬೆಳೆ ವಿಮೆ ಮಂಜೂರು ಮಾಡಿಲ್ಲ. ಅಧಿಕಾರಿಗಳ ಅವೈಜ್ಞಾನಿಕ ನೀತಿಯಿಂದ ಬೆಳೆ ನಷ್ಟಕ್ಕೀಡಾದರೂ ರೈತರು ಬೆಳೆ ವಿಮೆಯಿಂದ ವಂಚಿತವಾಗುವಂತಾಗಿದೆ. ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಈ ಆರೋಪ ಮಾಡಿದರು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರಗಿಸಿ. ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಮಾಹಿತಿ ಸಂಗ್ರಹಿಸಿ. ಹಾಗೆಯೇ ಬೆಳೆ ನಷ್ಟಕ್ಕೀಡಾದ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತ ಕಲ್ಪಿಸಲು ಕ್ರಮಕೈಗೊಳ್ಳಿ ಎಂದು ಕಾಗೋಡು ತಿಮ್ಮಪ್ಪರವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವೈಜ್ಞಾನಿಕ ಸಮೀಕ್ಷೆ: ಶಿಕಾರಿಪುರ ತಾಲೂಕಿನ 43 ಗ್ರಾಪಂ ವ್ಯಾಪ್ತಿಗಳಲ್ಲಿ ಹಾಗೂ ಶಿವಮೊಗ್ಗ ಮತ್ತು ಇತರೆ ತಾಲೂಕುಗಳಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಬೆಳೆಗೆ 2015-16 ನೇ ಸಾಲಿನ ಬೆಳೆ ವಿಮೆಯನ್ನು ರೈತರು ಮಾಡಿಸಿದ್ದಾರೆ. ಆದರೆ ಕೆಲವೇ ಕೆಲ ಗ್ರಾಪಂ ವ್ಯಾಪ್ತಿಗಳಿಗೆ ಮಾತ್ರ ಬೆಳೆ ನಷ್ಟದ ಹಣ ಬಿಡುಗಡೆಯಾಗಿದೆ. ಬೆಳೆ ನಷ್ಟವಾಗಿದ್ದರೂ ಇತರೆ ಗ್ರಾಮಗಳಲ್ಲಿ ವಿಮೆ ಮಂಜೂರಾಗಿಲ್ಲವೆಂದು ಬಿ.ವೈ.ರಾಘವೆಂದ್ರ ದೂರಿದರು. ಮತ್ತೊಂದೆಡೆ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ಮಾಡಿಲ್ಲ. ಯಾವುದೋ ಮನೆಯಲ್ಲಿ ಕುಳಿತು ಸಮೀಕ್ಷಾ ವರದಿ ಸಿದ್ಧಪಡಿಸಿಕೊಂಡು ಹೋಗಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ್ದರೆ ಬೆಳೆನಷ್ಟದ ವಸ್ತು ಸ್ಥಿತಿ ತಿಳಿಯುತ್ತಿತ್ತು. ಈ ವಿಷಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವ ಕೆಲಸ ಮಾಡಿಲ್ಲವೆಂದು ದೂರಿದರು. ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿಯಿಲ್ಲವಾಗಿದೆ. ಇದೀಗ ಬೆಳೆ ವಿಮೆ ಮಾಡಿಸಲು ನಿಗದಿ ಮಾಡಲಾಗಿರುವ ಕಾಲಾವಧಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕಾಲಾವಕಾಶ ವಿಸ್ತರಣೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಕ್ರಮಕೈಗೊಳ್ಳಿ:





