ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಲು ಡಿಸಿ ಸೂಚನೆ
ರಸ್ತೆ ಸುರಕ್ಷತಾ ಸಮಿತಿ ಸಭೆೆ

ಮಡಿಕೇರಿ ಜೂ.30 : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚಿನ ಸಾವು-ನೋವು ಸಂಭವಿ ಸುತ್ತಿದ್ದು, ಶಾಲಾ ಮಕ್ಕಳು ಕೂಡ ಅಪಘಾತಕ್ಕೆ ತುತ್ತಾಗು ತ್ತಿದ್ದಾರೆ. ಆದ್ದರಿಂದ ರಸ್ತೆ ಅಪಘಾತಗಳ ನಿಯಂತ್ರಣ ಮತ್ತು ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಹೆಚ್ಚಿನ ನಿಗಾ ಇಡುವುದು ಅಗತ್ಯವೆಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಯಸುತ್ತಾರೆ. ಆದರೆ ಶಾಲೆಗೆ ಕರೆದುಕೊಂಡು ಹೋಗುವ ಮತ್ತು ಬರುವ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿಲ್ಲ. ಆದ್ದರಿಂದ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಗಮನಹರಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಆಟೊ ರಿಕ್ಷಾಗಳಲ್ಲಿ ಹಾಗೂ ಇತರೆ ವಾಹನಗಳಲ್ಲಿ 12 ವರ್ಷದೊಳಗಿನ ಆರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ಹೇಳಲಾಗಿದೆ. ಆದರೆ ಇದನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತದೆ. ಈ ಸಂಬಂಧ ಪೋಷಕರೇ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ರಸ್ತೆ ಸುರಕ್ಷತೆ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಆರ್.ಟಿ.ಒ. ಅಧಿಕಾರಿಗಳು ತಪಾಸಣೆ ಮಾಡಬೇಕು. ದಂಡ ವಿಧಿಸುವುದರ ಜೊತೆಗೆ ಪರವಾನಗಿಯನ್ನು ರದ್ದು ಪಡಿಸುವಂತಾದರೆ ಭಯ ಬರುತ್ತದೆ. ಭಯವಿಲ್ಲದಿದ್ದಲ್ಲಿ ಯಾವುದೇ ಕಾರ್ಯಗಳು ನಡೆಯು ವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯಪಟ್ಟರು.
ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಉಬ್ಬುಗಳನ್ನು ತೆಗೆಸುವುದು, ಬೋಯಿಕೇರಿ ಬಳಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳುವುದು. ನಗರ ಮತ್ತು ಪಪಂ ಪ್ರದೇಶಗಳಲ್ಲಿ ಅವಶ್ಯವಿರುವ ಕಡೆ ಏಕಮುಖ ಸಂಚಾರಕ್ಕೆ ಗುರುತಿಸುವುದು, ಜೊತೆಗೆ ಮಡಿಕೇರಿ ನಗರದಲ್ಲಿ ರಸ್ತೆ ಅಗಲೀಕರಣ ಬಗ್ಗೆ ಗಮನಹರಿಸುವುದು ಮತ್ತಿತರ ಸಂಬಂಧ ಚರ್ಚೆ ನಡೆಯಿತು. ನಗರದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಿರ್ಮಾಣ ಸಂಬಂಧ ಒಂದು ತಿಂಗಳಲ್ಲಿ ಟೆಂಡರ್ ಆಹ್ವಾನಿಸಲಾಗುವುದು. ಸೆಪ್ಟಂಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ತಿಳಿಸಿದರು.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭ ವಿಸದಂತೆ ಹೆಚ್ಚಿನ ನಿಗಾವಹಿಸಬೇಕು. ಆ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ, ಪೊಲೀಸ್ ಇಲಾಖೆಯವರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಕಾಲೇಜು ರಸ್ತೆಯಲ್ಲಿ ಮಾರ್ಕಿಂಗ್ ಮಾಡುವುದು, ನೋ ಪಾರ್ಕಿಂಗ್ ಗುರುತಿ ಸುವುದು ಮತ್ತಿತರ ಸಂಬಂಧ ಚರ್ಚೆ ನಡೆಯಿತು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹೆಗಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ್, ಪೊಲೀಸ್ ಇನ್‌ಸ್ಪೆಕ್ಟರ್ ಮೇದಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ಮುಖ್ಯಾಂಶಗಳು
ಆಟೊ ರಿಕ್ಷಾಗಳು ಮತ್ತು ಇತರ ವಾಹನಗಳಲ್ಲಿ 12 ವರ್ಷದೊಳಗಿನ ಆರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ.
ರಸ್ತೆ ಸುರಕ್ಷತೆಯ ನಿಯಮ ಉಲ್ಲಂಘಿ ಸುವವರಿಗೆ ದಂಡ ವಿಧಿಸುವ ಜೊತೆಗೆ ಪರವಾನಿಗೆ ರದ್ದು ಪಡಿಸುವುದು.
ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿ ಸಿರುವ ಉಬ್ಬುಗಳ ತೆರವಿಗೆ ಡಿಸಿ ಸೂಚನೆ.







