ಹೊನ್ನಾವರ: ಜಡಿ ಮಳೆಗೆ ಅಪಾರ ಹಾನಿ

ಹೊನ್ನಾವರ, ಜೂ.30: ತಾಲೂಕಿನಲ್ಲಿ ಹಲವು ದಿನಗಳಿಂದ ಅಹೋರಾತ್ರಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಹಲವೆಡೆ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ. ನದಿ ಹಳ್ಳಗಳು ತುಂಬಿ ಹರಿಯಲಾರಂಭಿಸಿದೆ. ಶರಾವತಿ ನದಿಯ ಇಕ್ಕೆಲಗಳಲ್ಲಿ ವಾಸಿಸುವ ಜನರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಹಳದೀಪುರದಲ್ಲಿ ಬೃಹತ್ ಆಲದ ಮರವು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ನಾಲ್ಕು ತಾಸು ವಾಹನ ಸಂಚಾರ ಸ್ಥಗಿತಗೊಂಡು ಪ್ರವಾಸಿಗರು ಪರದಾಡುವಂತಾಯಿತು.
ಮಳೆಯಿಂದ ಬಾಸ್ಕೇರಿ ಹೊಳೆ ತುಂಬಿ ಹರಿದು ಶೇಡಿಮೂಲೆ ಹಾಗೂ ಮುಗ್ವಾ ಹರಿಜನಕೇರಿ, ಬಾಸ್ಕೇರಿ ಬಂಕನಹಿತ್ಲ ಹೊಸಾ ಕುಳಿ ಗ್ರಾಮದ ಬಾಸ್ಕೇರಿ ಮಜರೆಗಳಲ್ಲಿ ಹೊಳೆಯ ಎರಡು ದಿಕ್ಕಿನಲ್ಲಿ ಅಜಮಾಸ 75 ರಿಂದ 90 ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿ ಬಂದಿದೆ.
ಸ್ಥಳಕ್ಕೆ ಹೊನ್ನಾವರ ತಹಶೀಲ್ದಾರ್ ಜಿ.ಎಂ. ಬೋರಕರ್, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಹಳದೀಪುರ ಗ್ರಾಪಂ ವ್ಯಾಪ್ತಿಯ ಕರಿಮೂಲೆ, ಕಂಟಂಚಿಕೇರಿ, ತಾರಿಬಾಗಿಲು, ಸಾಲಿಕೇರಿ, ಕಲ್ಕಟ್ಟೆಕೇರಿ ಮಜರೆ ಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ನೆರೆಹಾವಳಿ ಕುರಿತು ಪರಿಶೀಲನೆ ನಡೆಸಿತು.
ಕರಿಮೂಲೆ ಮಜರೆಯಲ್ಲಿ ಭಾರೀ ಮಳೆಯಿಂದ ಅಜಮಾಸ 80 ರಿಂದ 100 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕರ್ಕಿ ಗ್ರಾಪಂ ವ್ಯಾಪ್ತಿಯ ನಡುಚಿಟ್ಟೆ ಮಜರೆಗಳ 5 ರಿಂದ 6 ಮನೆಗಳಿಗೆ ನೀರು ನುಗ್ಗಿದ್ದು ಜೆಸಿಬಿಯಿಂದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. ಕಡತೋಕಾ ಗ್ರಾಪಂ ವ್ಯಾಪ್ತಿಯ ಹುಜಿಮರಿ, ಗುಡ್ನಕಟ್ಟು, ಬೋಗ್ರಿಹಿತ್ಲ ಮಜರೆಗಳಿಗೆ ಸುತ್ತ ನೆರೆ ನೀರು ಆವರಿಸಿದ್ದು, ಸಾರ್ವಜನಿಕರನ್ನು ಸ್ಥಳಾಂತರಿಸಲು 3 ಮಜರೆಗಳಿಗೆ ದೋಣಿ ವ್ಯವಸ್ಥೆ ಮಾಡಲಾಗಿತ್ತು. ಗುಡ್ನಕಟ್ಟು, ಹುಜಿಮರಿ, ಹೆಬ್ಳೆಕೊಪ್ಪ, ಮೂಲೆಗದ್ದೆ, ಮಾಡಗೇರಿ ಮಜರೆಗಳ ಮನೆಗಳಿಗೆ ನುಗ್ಗಿದ್ದ ನೀರು ಸರಾಗ ವಾಗಿ ಹರಿದು ಹೋಗಲು ಅಧಿಕಾರಿಗಳ ತಂಡ ವ್ಯವಸ್ಥೆ ಮಾಡಿತು. ಕಾಸರಕೋಡ ಗ್ರಾಪಂ ವ್ಯಾಪ್ತಿಯ ರೋಶನ ಮೊಹಲ್ಲಾ, ಟೊಂಕಾ ಮಜರೆಗಳಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನೀರು ಹರಿದು ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಮಂಕಿ ಗ್ರಾಮದ ಕುಂಬಾರ ಕೇರಿಯಲ್ಲಿ ನೀರು ತುಂಬಿ ಜನರು ಪರದಾಡುವಂತಾಯಿತು. ಕೆಳಗಿನೂರು ಗ್ರಾಪಂ ವ್ಯಾಪ್ತಿಯ ನಾಜಗಾರ ಮಜರೆಯಲ್ಲಿ ಶ್ರೀಧರ ಸುಬ್ಬು ನಾಯ್ಕ ರವರ ಮನೆಯ ಮೇಲೆ ಹಲಸಿನ ಮರ ಬಿದ್ದು 40 ಸಾವಿರ ರೂ. ವೌಲ್ಯದ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಮಂಜುನಾಥ ಮಾದೇವ ನಾಯ್ಕ ರವರಿಗೆ ಸೇರಿದ 20 ಪೂಟ್ ಕಾಂಪೌಂಡ್ ಗೋಡೆ ಕುಸಿದು, ರೂ. 60 ಸಾವಿರ ಹಾನಿ ಸಂಭವಿಸಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಮೋಹನ ದಾಮೋದರ ಶ್ಯಾನಬಾಗ ಮನೆಯ ಮೇಲೆ ಮಾವಿನಮರ ಬಿದ್ದು ಹಾನಿ ಆಗಿದ್ದು ರೂ. 15 ಸಾವಿರ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.
ಮೇಲಿನ ಇಡಗುಂಜಿ ಗ್ರಾಮ ಪಂಚಾಂುತ ವ್ಯಾಪ್ತಿಯ ವಿದ್ಯಾಧರ ಕ್ಷೇತ್ರಪಾಲ ಹೆಗಡೆ ರವರ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿರುವ ಪರಿಣಾಮ ರೂ. 20 ಸಾವಿರ ಅಂದಾಜಿಸಲಾಗಿದೆ. ಈ ಸಂಬಂಧ ಬುಧವಾರ ಸಭೆ ನಡೆಸಿದ ತಹಶೀಲ್ದಾರ್, ಆಯಾ ಗ್ರಾಮಗಳಿಗೆ ನಿಯೋಜಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ಅನಾಹುತ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಕ್ರಮ ವಹಿಸಲು ಸೂಕ್ತ ನಿರ್ದೇಶನ ನೀಡಿದ್ದಾರೆ.







