8 ಸಾವಿರ ಕೊಳವೆಬಾವಿ ಕೊರೆಸಲು ಕ್ರಮ: ಸಚಿವ ಆಂಜನೇಯ

ಬೆಂಗಳೂರು, ಜೂ. 30: ಗಂಗಾಕಲ್ಯಾಣ ಯೋಜನೆಯಡಿ ಮೂರು ವರ್ಷಗಳಲ್ಲಿ 48ಸಾವಿರ ಕೊಳವೆಬಾವಿಗಳನ್ನು ಕೊರೆಸುವ ಗುರಿ ಹಾಕಿಕೊಂಡಿದ್ದು, ಆ ಪೈಕಿ 40 ಸಾವಿರ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಉಳಿದ 8ಸಾವಿರ ಕೊಳವೆಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 25 ಸಾವಿರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲಾಖೆಯಿಂದ ಮೂರು ವರ್ಷಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಶೀಘ್ರದಲ್ಲೇ ಶ್ವೇತಪತ್ರ ಪ್ರಕಟಿಸಲಾಗುವುದು ಎಂದರು.
ತ್ವರಿತಕ್ಕೆ ಸೂಚನೆ: ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸಭೆಯಲ್ಲಿ ಬಾಕಿ ಉಳಿದಿರುವ 8 ಸಾವಿರ ಕೊಳವೆಬಾವಿಗಳನ್ನು ತ್ವರಿತವಾಗಿ ಕೊರೆಸುವಂತೆ ಸಲಹೆ ನೀಡಿದ್ದಾರೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಟೆಂಡರ್ ಕರೆದು ಕೊಳವೆಬಾವಿಗಳನ್ನು ಕೊರೆಸಲು ಕ್ರಮ ವಹಿಸಲಾಗಿದೆ ಎಂದರು.
ಕಲಬುರ್ಗಿ ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಅವರ ಮೇಲೆ ಪ್ರಾದೇಶಿಕ ಆಯುಕ್ತರು ಇಲಾಖೆಗೆ ಮಾಹಿತಿ ನೀಡದೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದು, ವರದಿ ಬಂದ ಬಳಿಕ ಅಧಿಕಾರಿಯಿಂದ ತಪ್ಪಾಗಿದ್ದರೆ ಸಿಎಂ ಸೂಚನೆಯಂತೆ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಂಜನೇಯ ಸ್ಪಷ್ಟನೆ ನೀಡಿದರು.
ಕಲಬುರ್ಗಿ ಪ್ರಾದೇಶಿಕ ಆಯುಕ್ತರು ದುರುದ್ದೇಶದಿಂದ ಪ್ರಕರಣ ದಾಖಲಿಸಿರುವ ಅನುಮಾನಗಳಿವೆ. ಹೀಗಾಗಿಯೇ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಕ್ರಮ ಕೈಗೊಳ್ಳಲು ಸಾಧ್ಯ. ಅಮಾಯಕರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಆಂಜನೇಯ ಅಧಿಕಾರಿಯನ್ನು ಸಮರ್ಥಿಸಿಕೊಂಡರು.





