ಮಲೆಕುಡಿಯರಲ್ಲಿ ಕಾಡುತ್ತಿರುವ ರಕ್ತಹೀನತೆ ಕಾಯಿಲೆಯ ಮೂಲಪತ್ತೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಜೂ.30: ದ.ಕ. ಜಿಲ್ಲೆಯಲ್ಲಿರುವ 1,604 ಕುಟುಂಬಗಳ 7,684 ಮಲೆಕುಡಿಯರಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತಿರುವ ರಕ್ತಹೀನತೆ ಕಾಯಿಲೆಯ ಮೂಲ ಪತ್ತೆಮಾಡಲು ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಮಲೆಕುಡಿಯರ 132 ಕಾಲನಿಗಳಲ್ಲಿ ಆರೋಗ್ಯ ಅರಿವು, ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿರುವ ಮಲೆಕುಡಿಯ ಜನಾಂಗದವರ ಸಮಗ್ರ ಪಾಲನೆ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ತಜ್ಞವೈದ್ಯರ ತಂಡ ಹಾಗೂ ಸಂಚಾರಿ ಪ್ರಯೋಗಾಲಯ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿಬ್ಬಂದಿಯನ್ನು ಮತ್ತು ಆಯಾ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನೊಂದಿಗೆ ಮಲೆಕುಡಿಯ ಜನಾಂಗದವರನ್ನು ಆರೋಗ್ಯ ಶಿಬಿರಗಳಿಗೆ ಕರೆತರಲಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವತಿಯಿಂದ ಅಗತ್ಯ ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ಅಧಿಕಾರಿ ಹೇಮಲತಾ ತಿಳಿಸಿದರು.
ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಉಪಸ್ಥಿತರಿದ್ದರು.







