ಇಂಜಿನಿಯರ್‌ಗಳು, ಆಪ್ತ ಸಹಾಯಕನ ನಿವಾಸ-ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಶಾಸಕರ ಮನೆಯಲ್ಲಿ ಬಿಬಿಎಂಪಿ ಕಡತ ಪತ್ತೆ
ಬೆಂಗಳೂರು, ಜೂ. 30: ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ 900 ಕಡತಗಳು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಿವಾಸದಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮೂವರು ಇಂಜಿನಿಯರ್, ಶಾಸಕರ ಆಪ್ತ ಜಯರಾಮ್ ಹಾಗೂ ಗುತ್ತಿಗೆದಾರನ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಗುರುವಾರ ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ 20 ಮಂದಿ ಅಧಿಕಾರಿಗಳು ಹಾಗೂ 35 ಮಂದಿ ಸಿಬ್ಬಂದಿ ಏಕಕಾಲಕ್ಕೆ 8ಕಡೆಗಳನ್ನು ದಿಢೀರ್ ದಾಳಿ ನಡೆಸಿದ್ದು, ಬಿಬಿಎಂಪಿ ಕಡತ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ದಾಖಲೆ-ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ಪಶ್ಚಿಮ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಾಲತೇಶ್, ಬಿಬಿಎಂಪಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ಎಂ.ಕೆಂಪೇಗೌಡ, ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿ ಯರ್ ಐ.ಕೆ.ವಿಶ್ವಾಸ್ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಅಲ್ಲದೆ, ಶಾಸಕರ ಆಪ್ತ ಎಂ.ಆರ್.ಜಯರಾಮ್ ಅವರ ಹೇಸರಘಟ್ಟದ ಗುಣಿ ಅಗ್ರಹಾರ ವಿಲೇಜ್‌ನಲ್ಲಿರುವ ನಿವಾಸದ ಹಾಗೂ ಗುತ್ತಿಗೆದಾರ ವೆಂಕಟೇಶ್ ಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ: ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕಡತಗಳು ವೈಯಾಲಿ ಕಾವಲ್‌ನಲ್ಲಿರುವ ಶಾಸಕ ಮುನಿರತ್ನ ಅವರ ನಿವಾಸದಲ್ಲಿ 2014ರ ಡಿ.27ರಂದು ಪತ್ತೆಯಾಗಿತ್ತು.
ಆ ಹಿನ್ನೆಲೆಯಲ್ಲಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ಲೋಕಾಯುಕ್ತ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಇಂದು ಶಾಸಕರ ಆಪ್ತ ಜಯರಾಮ್ ಸೇರಿ ಮೂವರು ಇಂಜಿನಿಯರ್‌ಗಳ ಕಚೇರಿ ಹಾಗೂ ನಿವಾಸಗಳು ಸೇರಿ ಎಂಟು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಶಾಸಕ ಮುನಿರತ್ನ ಅವರ ಆಪ್ತ ಎಂ.ಆರ್.ಜಯರಾಮ್ ವೃಷಾಬಾದ್ರಿ ಕನ್‌ಸ್ಟ್ರಕ್ಷನ್ ಕಂಪೆನಿಯ ಮಾಜಿ ಉದ್ಯೋಗಿಯಾಗಿದ್ದು, ಈ ಕಂಪೆನಿ ಶಾಸಕರ ಬೇನಾಮಿ ಆಸ್ತಿ ಎಂಬುದು ಗೊತ್ತಾಗಿದೆ ಎಂದು ಲೋಕಾಯುಕ್ತ ಉನ್ನತ ಮೂಲಗಳು ಖಚಿತಪಡಿಸಿವೆ.
ಇಂಜಿನಿಯರ್ ಮಾಲತೇಶ್ ನಿವಾಸದಲ್ಲಿ ಸುಮಾರು 3.50ಲಕ್ಷ ನಗದು, 2ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಚಿನ್ನಾಭರಣಗಳು ಪತ್ತೆಯಾಗಿದೆ. ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ ಮಹತ್ವದ ಕಡತಗಳು ದೊರೆತಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





