ಶಿವಸೇನೆ: ಬಿಜೆಪಿಗೆ ಬಿಸಿ ತುಪ್ಪ

ಸದ್ಯಕ್ಕೆ ಈ ದೇಶದಲ್ಲಿ ಮೋದಿ ಸರಕಾರದ ವಿರುದ್ಧ ವಿರೋಧ ಪಕ್ಷವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬೆಲೆಯೇರಿಕೆಯೂ ಸೇರಿದಂತೆ ಮೋದಿ ಸರಕಾರ ದೇಶದೊಳಗೂ, ವಿದೇಶಗಳಲ್ಲೂ ಎದುರಿಸುತ್ತಿರುವ ಮುಖಭಂಗಗಳನ್ನು ಜನರೆದುರು ವಿವರವಾಗಿ ತೆರೆದಿಡುವ ಎದೆಗಾರಿಕೆ, ಹುಮ್ಮಸ್ಸು ಕಾಂಗ್ರೆಸ್ ಪಕ್ಷದಲ್ಲಿ ಕಾಣುತ್ತಿಲ್ಲ. ರಾಹುಲ್ ಗಾಂಧಿಯೊಂದಿಗೆ ಬಲವಾಗಿ ಗುರುತಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಒಳಗೊಳಗೆ ಹಿಂಜರಿಕೆ ತೋರಿಸುತ್ತಿರುವುದೂ ಇದಕ್ಕೊಂದು ಕಾರಣವಾಗಿರಬಹುದು. ಮಾಧ್ಯಮಗಳೂ ಆಡಳಿತ ಪಕ್ಷದ ಜೊತೆಗೆ ಸಕ್ರಿಯವಾಗಿ ಕೈ ಜೋಡಿಸಿರುವುದು, ವಿರೋಧಪಕ್ಷಗಳ ಧ್ವನಿ ಅಡಗುವುದಕ್ಕೆ ಇನ್ನೊಂದು ಮುಖ್ಯ ಕಾರಣ. ವಿಶೇಷವೆಂದರೆ ನರೇಂದ್ರ ಮೋದಿ ಸರಕಾರದ ವಿರುದ್ಧ ಎರಡು ಪ್ರಾದೇಶಿಕ ಪಕ್ಷಗಳನ್ನು ಹೊರತು ಪಡಿಸಿ, ಉಳಿದ ಪಕ್ಷಗಳು ಧ್ವನಿಯೆತ್ತುವುದಕ್ಕೆ ಅಂಜುತ್ತಿವೆ. ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಎಸ್‌ಪಿಯಾಗಲಿ ಅಥವಾ ಅಲ್ಲಿನ ಇನ್ನೊಂದು ಮುಖ್ಯ ಪಕ್ಷವಾಗಿರುವ ಬಿಎಸ್‌ಪಿಯಾಗಲಿ ಮೋದಿಯ ವಿರುದ್ಧ ದುರ್ಬಲವಾಗಿ ವ್ಯವಹರಿಸುತ್ತಿವೆ.
ಇಂದು ಮೋದಿಯ ವಿರುದ್ಧ ಒಂಟಿ ಚಿರತೆಯಂತೆ ಎರಗುತ್ತಿರುವುದು ದಿಲ್ಲಿಯ ಕೇಜ್ರಿವಾಲ್ ಮಾತ್ರ. ಆದರೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್‌ಗೆ ಕೆಲವು ಮಿತಿಗಳಿವೆ. ಇದನ್ನು ಬಳಸಿಕೊಂಡು ದಿಲ್ಲಿಯ ಅಧಿಕಾರವನ್ನು ಸ್ವತಃ ಮೋದಿ ನಿಯಂತ್ರಿಸುತ್ತಿದ್ದಾರೆ. ಅಲ್ಲಿನ ಪೊಲೀಸ್ ವ್ಯವಸ್ಥೆ ಮೋದಿಯ ಮೂಗಿನ ನೇರಕ್ಕೆ ಕುಣಿಯುತ್ತಿದೆ. ಆದುದರಿಂದ, ಕೇಜ್ರಿವಾಲ್ ಅವರ ಹಾರಾಟ, ಹೋರಾಟ ವಿಶೇಷ ಪರಿಣಾಮವನ್ನು ಬೀರುತ್ತಿಲ್ಲ. ವಿಪರ್ಯಾಸವೆಂದರೆ, ಇಂದು ಬಿಜೆಪಿಯ ಪಾಲಿಗೆ ಅತಿ ದೊಡ್ಡ ತಲೆನೋವಾಗಿರುವುದೇ ಮಹಾರಾಷ್ಟ್ರದಲ್ಲಿ ಅದರ ಮಿತ್ರ ಪಕ್ಷವಾಗಿರುವ ಶಿವಸೇನೆ. ಒಂದೆಡೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಸರಕಾರವನ್ನು ನಡೆಸುತ್ತಲೇ, ಮತ್ತೊಂದೆಡೆ ಕೇಂದ್ರ ಬಿಜೆಪಿಯ ಮೇಲೆ ತೀವ್ರ ದಾಳಿ ನಡೆಸುತ್ತಿರುವ ಶಿವಸೇನೆಯು ಮೋದಿ ನೇತೃತ್ವದ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಮುಸುಕಿನ ಗುದ್ದಾಟ ಎಷ್ಟು ತಾರಕಕ್ಕೇರಿದೆಯೆಂದರೆ, ಇದೀಗ ಬಿಜೆಪಿಯೇ ‘‘ಧೈರ್ಯವಿದ್ದರೆ ನಮ್ಮ ಜೊತೆ ಮೈತ್ರಿಯನ್ನು ಕಡಿದುಕೊಳ್ಳಿ’’ ಎನ್ನುವಷ್ಟರ ಮಟ್ಟಿಗೆ ಬಂದಿದೆ.
ನರೇಂದ್ರ ಮೋದಿಯ ಯೋಗದ ಗಿಮಿಕ್ ವಿರುದ್ಧವೂ ದಾಳಿ ನಡೆಸಿರುವ ಶಿವಸೇನೆ, ಈ ದೇಶದ ಬೆಲೆಯೇರಿಕೆಗೆ ಯೋಗ ಪರಿಹಾರವಲ್ಲ ಎಂದು ವ್ಯಂಗ್ಯ ವಾಡಿದೆ. ನರೇಂದ್ರ ಮೋದಿಯ ಆಡಳಿತವನ್ನು ನಿಜಾಮರ ಆಡಳಿತಕ್ಕೆ ಹೋಲಿಕೆ ಮಾಡಿದೆ. ಹಾಗೆಯೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಪೋಸ್ಟರ್‌ಗಳ ಮೂಲಕ ಟೀಕೆ ಮಾಡುತ್ತಿದೆೆ. ತಮಾಷೆ ಮಾಡುತ್ತಿದೆ. ಬಿಜೆಪಿ ಪದೇ ಪದೇ ಎಚ್ಚರಿಕೆಯನ್ನು ನೀಡುತ್ತಿದ್ದರೂ ಶಿವಸೇನೆಯ ನಾಯಕರು ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ. ಸದ್ಯಕ್ಕೆ ತನ್ನ ಮಿತ್ರನ ಆಡಳಿತದ ದೌರ್ಬಲ್ಯಗಳನ್ನು ಜನರ ಮುಂದಿಡುವ ಮೂಲಕ ಶಿವಸೇನೆಯೇ ಮೋದಿ ಸರಕಾರಕ್ಕೆ ಪ್ರಬಲ ವಿರೋಧ ಪಕ್ಷವಾಗಿದೆ. ಮೋದಿ ಸರಕಾರ ಕಾರ್ಪೊರೇಟ್‌ಗಳಿಗೆ ಮಣೆ ಹಾಕುತ್ತಿರುವುದನ್ನು, ಎನ್‌ಎಸ್‌ಜಿಯಲ್ಲಿ ಮೋದಿ ಮಾಡಿರುವ ಅವಾಂತರವನ್ನೂ ಶಿವಸೇನೆ ಟೀಕಿಸಲು ಹಿಂಜರಿದಿಲ್ಲ. ಸ್ಥಿತಿ ಹೀಗೆ ಮುಂದುವರಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರದ ಬುಡ ಅಲುಗಾಡುವುದರಲ್ಲಿ ಅನುಮಾನವಿಲ್ಲ. ಹಾಗೆಂದು ಶಿವಸೇನೆ ಜನತೆಯ ಹಿತಾಸಕ್ತಿಗೆ ಪೂರಕವಾಗಿಯೇನೂ ಮಾತನಾಡುತ್ತಿಲ್ಲ.
ಅಧಿಕಾರ ಹಂಚಿಕೊಳ್ಳುವ ಸಂದರ್ಭದಲ್ಲಿ ಶಿವಸೇನೆಯ ಮುಖಂಡರಲ್ಲಿ ಹುಟ್ಟಿಕೊಂಡ ಅಸಮಾಧಾನದ ಬೇರೆ ಬೇರೆ ರೂಪಗಳಷ್ಟೇ ಇವು. ಶಿವಸೇನೆ ತೀರಾ ಅನಿವಾರ್ಯ ಎನ್ನುವ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿಕೊಂಡಿತ್ತು. ಈ ಮೊದಲು ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಶಿವಸೇನೆ ಕೈಜೋಡಿಸಿಕೊಳ್ಳುವ ಕುರಿತು ರಾಜಕೀಯ ಮಾತುಕತೆಗಳು ನಡೆದಿದ್ದವು. ರಾಷ್ಟ್ರೀಯ ಪಕ್ಷಗಳನ್ನು ಮಹಾರಾಷ್ಟ್ರದಿಂದ ದೂರವಿಟ್ಟು, ಮಹಾರಾಷ್ಟ್ರವನ್ನು ಶಿವಸೇನೆ ಮತ್ತು ಎನ್‌ಸಿಪಿ ಹಂಚಿಕೊಳ್ಳುವ ಬಗ್ಗೆ ಯೋಜನೆಗಳು ರೂಪುಗೊಂಡಿದ್ದವು. ಆದರೆ ಚುನಾವಣಾ ಫಲಿತಾಂಶಕ್ಕೆ ಈ ಎರಡು ಪಕ್ಷಗಳನ್ನು ಒಟ್ಟು ಸೇರಿಸುವ ಶಕ್ತಿ ಇರಲಿಲ್ಲ. ಬಿಜೆಪಿ ಅತ್ಯಧಿಕ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲು ಶಿವಸೇನೆ ಭಾರೀ ಬೇಡಿಕೆಯನ್ನು ಇಟ್ಟಿತ್ತು. ಸರಕಾರದಲ್ಲಿ ಮಹತ್ವದ ಸ್ಥಾನವನ್ನು ಅದು ಅಪೇಕ್ಷೆ ಪಟ್ಟಿತ್ತು. ಆದರೆ ಇದೇ ಸಂದರ್ಭದಲ್ಲಿ ಎನ್‌ಸಿಪಿ ಕೂಡ ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ಧ ಎಂದಾಗ ಶಿವಸೇನೆ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿತು. ಬಿಜೆಪಿಯಿಂದ ತಾನು ದೂರ ಸರಿದರೆ ಎನ್‌ಸಿಪಿ ಆ ಸಂದರ್ಭವನ್ನು ಬಳಸಿ ಅಧಿಕಾರಕ್ಕೇರುತ್ತದೆ. ಅಧಿಕಾರರಹಿತವಾಗಿ ಹೊರಗುಳಿದರೆ ಪಕ್ಷದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದೇ ಸಂದರ್ಭದಲ್ಲಿ ಬಿಜೆಪಿಯೂ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಆಸಕ್ತಿ ತೋರಿಸಿತು. ಅಥವಾ ಹಾಗೆ ನಟಿಸಿತು. ಈ ಕಾರಣದಿಂದ, ಶಿವಸೇನೆ ಅನಿವಾರ್ಯವಾಗಿ ಬಿಜೆಪಿಗೆ ಬೆಂಬಲ ನೀಡಬೇಕಾಯಿತು. ಆದರೆ ತನಗೆ ಬೇಕಾದ ಸ್ಥಾನ ನೀಡದ ಬಿಜೆಪಿಯ ಕುರಿತಂತೆ ಅಸಮಾಧಾನ ಹೊತ್ತಿ ಉರಿಯುತ್ತಲೇ ಇತ್ತು. ಅಧಿಕಾರ ಸ್ವೀಕಾರಸಮಾರಂಭದಲ್ಲೂ ಇದು ಬಹಿರಂಗಗೊಂಡಿತ್ತು. ಬಿಜೆಪಿಯ ಕುರಿತಂತೆ ಶಿವಸೇನೆ ಭೀತಿಯನ್ನು ಹೊಂದಲು ಮುಖ್ಯ ಕಾರಣ, ಈ ಎರಡೂ ಪಕ್ಷಗಳ ಸಿದ್ಧಾಂತ ಒಂದೇ ಆಗಿರುವುದು. ತನ್ನನ್ನು ಬಿಜೆಪಿಗಿಂತ ಭಿನ್ನ ಎಂದು ತೋರಿಸಿಕೊಳ್ಳದೇ ಇದ್ದರೆ ಶಿವಸೇನೆಯ ಅಸ್ತಿತ್ವವನ್ನೇ ಬಿಜೆಪಿ ಆಪೋಶನ ತೆಗೆದುಕೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗಿಂತ ಶಿವಸೇನೆಯ ವರ್ಚಸ್ಸೇ ಅಧಿಕವಿದೆ. ಆದರೆ ಕೇಂದ್ರದ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಮಹಾರಾಷ್ಟ್ರದಲ್ಲಿ ತನ್ನ ಬಲವನ್ನು ವಿಸ್ತರಿಸಿಕೊಂಡರೆ ಅದರ ನೇರ ಪರಿಣಾಮವನ್ನು ಅನುಭವಿಸುವುದು ಶಿವಸೇನೆಯಾಗಿದೆ. ಆದುದರಿಂದಲೇ ಶಿವಸೇನೆಗೆ ಅಧಿಕಾರ ಬೇಕು. ಆದರೆ ಬಿಜೆಪಿಯೊಂದಿಗೆ ಸಂಬಂಧಬೇಡ. ಒಂದು ರೀತಿಯಲ್ಲಿ ಇದು ಆಷಾಢಭೂತಿತನವಾಗಿದೆ. ಆದರೆ ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ತಂತ್ರ ಅನಿವಾರ್ಯವಾಗಿದೆ. ಬಿಜೆಪಿಯೊಂದಿಗೆ ಶಿವಸೇನೆ ಪದೇ ಪದೇ ಕಾಲು ಕೆರೆದು ಜಗಳಕ್ಕಿಳಿಯುವುದನ್ನು ನೋಡಿದರೆ, ಭವಿಷ್ಯದಲ್ಲಿ ಎನ್‌ಸಿಪಿ-ಶಿವಸೇನೆಯ ನಡುವೆ ಮೈತ್ರಿಗೆ ವೇದಿಕೆಯೊಂದು ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.







