ಕಿದಿಯೂರು: ಗಾಳಿ-ಮಳೆಗೆ ಮನೆಗಳು ಕುಸಿತ
ಉಡುಪಿ, ಜೂ.30: ಕಳೆದೆರಡು ದಿನಗಳಿಂದ ಸತತವಾಗಿ ಸುರಿದ ಮಳೆ ಇಳಿಮುಖಗೊಂಡಿದ್ದು, ನೀರಿನಿಂದಾವೃತ್ತವಾಗಿದ್ದ ತಗ್ಗು ಪ್ರದೇಶಗಳ ನೀರು ಹರಿದುಹೋಗಿದ್ದು, ಜನತೆ ಸಮಾಧಾನದ ನಿಟ್ಟುಸಿರುವ ಬಿಡುವಂತಾಗಿದೆ. ಅದೇರೀತಿ ಕಡಲ್ಕೊರೆತ ಸ್ವಲ್ಪ ಕಡಿಮೆಯಾಗಿದೆ.
ಉಡುಪಿ ಮತ್ತು ಕುಂದಾಪುರ ತಾಲೂಕಿನ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ಸದ್ಯಕ್ಕೆ ಕಡಿಮೆಯಾಗಿದೆ. ಆದರೆ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲುವಿನ ಸುಮಾರು 40 ಮನೆಗಳವರು ಇನ್ನೂ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ ಅವರು ಒತ್ತಾಯಿಸುತ್ತಿದ್ದಾರೆ.
ಮನೆ ಕುಸಿತ: ಉಡುಪಿ ಕಿದಿಯೂರಿನ ಸುಲೋಚನಾ ಎನ್.ಕುಂದರ್ ಎಂಬವರ ಮನೆ ಗಾಳಿ-ಮಳೆಗೆ ಕಳೆದ ರಾತ್ರಿ ಸಂಪೂರ್ಣವಾಗಿ ಕುಸಿದಿದ್ದು ಸುಮಾರು ಒಂದು ಲಕ್ಷ ರೂ.ಹಾನಿಯಾಗಿದೆ. ಉದ್ಯಾವರ ಗ್ರಾಮದ ಕಟ್ಟಬೈಲಿನ ಭವಾನಿ ಪೂಜಾರ್ತಿ ಎಂಬವರ ಮನೆ ಮೇಲೆ ತೆಂಗಿನಮರ ಬಿದ್ದು 70,000 ರೂ. ನಷ್ಟವಾಗಿದೆ. ಗಿಳಿಯಾರಿನ ಅಂಬಾ ಎಂಬವರ ಮನೆ ಮೇಲೆ ಮರಬಿದ್ದು 10,000 ರೂ. ನಷ್ಟ ಉಂಟಾಗಿದೆ.
ಬೈಂದೂರು ಎಳಜಿತ್‌ನಲ್ಲಿ ಭಾರೀ ಗಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿದೆೆ. ಗ್ರಾಮದ ಕೃಷ್ಣ ಪೂಜಾರಿ ಎಂಬವರ ಮನೆಯ ಹೆಂಚು-ಪಕ್ಕಾಸು ಗಾಳಿಗೆ ಹಾರಿಹೋಗಿದ್ದರೆ, ನಾಗು ಕೊಠಾರಿ ಎಂಬವರ ತೆಂಗು ಮತ್ತು ಅಡಿಕೆ ಮರಗಳಿಗೆ ಹಾನಿಯಾಗಿದೆ.
ಶಿರೂರು ಗ್ರಾಮದ ಜ್ಯೋತಿ, ದುರ್ಗಯ್ಯ ಮೇಸ್ತ, ರಾಜು ಪೂಜಾರಿ, ಸುಬ್ಬು ಆಚಾರ್ತಿ ಹಾಗೂ ಮರವಂತೆ ಗ್ರಾಮದ ರಾಜೀವಿ ಆಚಾರ್ಯ ಎಂಬವರ ಮನೆಗಳಿಗೆ ಗಾಳಿಯಿಂದ ಹಾನಿಯಾಗಿರುವುದು ವರದಿಯಾಗಿದೆ.
ನೀರಿಗೆ ಬಿದ್ದು ಮೃತ್ಯು
ಕುಂದಾಪುರ ತಾಲೂಕಿನ ಹಳ್ನಾಡು ಗ್ರಾಮದ ಗಣಪತಿ ದೇವಸ್ಥಾನದ ಬಳಿಯ ಹೇರಿಕೆರೆಯ ಅಂಚಿನಲ್ಲಿ ನಿನ್ನೆ ರಾತ್ರಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಾರುತಿ ದೇವಾಡಿಗ (45) ಎಂಬವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಕಂಡ್ಲೂರಿನ ರಘುಸನ್ಸ್ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಕೆಲಸ ಮುಗಿಸಿ ಹಳ್ನಾಡು ಗ್ರಾಮದ ಬಿಲ್ಲಾರಬೆಟ್ಟುನಲ್ಲಿರುವ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೃತದೇಹವನ್ನು ಇಂದು ಬೆಳಗ್ಗೆ 10:30ರ ಸುಮಾರಿಗೆ ಕೆರೆಯಿಂದ ಮೇಲೆತ್ತಲಾಗಿದೆ.





