ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಸರಕಾರ ಮೃದು!
ಹೊಸದಿಲ್ಲಿ, ಜೂ.30: ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ವಿದ್ಯಾರ್ಥಿ ಗುಂಪುಗಳು ಹಾಗೂ ವಾಕ್‌ಸ್ವಾತಂತ್ರವನ್ನು ನಿಯಂತ್ರಿಸುವ ಯೋಜನೆಯಿಂದ ಸರಕಾರವು ಹಿಂದೆ ಸರಿಯುವ ಸೂಚನೆ ನೀಡಿದೆ. ಸಾರ್ವಜನಿಕರ ಸಲಹೆಗಳಿಗಾಗಿ ಬುಧವಾರ ಪ್ರಕಟಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಇದನ್ನು ಸೂಚಿಸಿದೆ.
ಮಾನವ ಸಂಪನ್ಮೂಲ ಸಚಿವಾಲಯವು ವಿದ್ಯಾರ್ಥಿ ಸಂಘಟನೆಗಳ ಧನಾತ್ಮಕ ಪಾತ್ರವನ್ನು ಉತ್ತೇಜಿಸುತ್ತದೆಂದು ಕರಡಿನಲ್ಲಿ ಹೇಳಲಾಗಿದೆ. ನಿರ್ದಿಷ್ಟವಾಗಿ ಜಾತಿ, ಮತ ಅಥವಾ ಯಾವುದೇ ರಾಜಕೀಯ ಪಕ್ಷವನ್ನಾಧರಿಸಿದ ವಿದ್ಯಾರ್ಥಿ ಗುಂಪುಗಳ ಮೇಲೆ ನಿಷೇಧ ಹೇರುವಂತೆ ಟಿಎಸ್‌ಆರ್ ಸುಬ್ರಹ್ಮಣ್ಯನ್ ಸಮಿತಿಯು ನೀಡಿದ್ದ ಸಲಹೆಗೆ ಇದು ತದ್ವಿರುದ್ಧವಾಗಿದೆ.
ಸುಮಾರು 30 ವರ್ಷಗಳಲ್ಲೇ ಮೊದಲ ಪ್ರಯತ್ನವೆಂಬಂತೆ, ಶಾಲೆಗಳಿಂದ ವಿಶ್ವವಿದ್ಯಾನಿಲಯಗಳ ತನಕ ಶಿಕ್ಷಣ ವ್ಯವಸ್ಥೆಯನ್ನು ಪುನಾರಚಿಸಲು 2015ರಲ್ಲಿ ರಚಿಸಲಾಗಿದ್ದ ಸುಬ್ರಹ್ಮಣ್ಯನ್ ಸಮಿತಿಯ ಕೆಲವು ಶಿಫಾರಸುಗಳ ಬಗ್ಗೆ ಸರಕಾರವು ವ್ಯಾಪಕ ಟೀಕೆಯನ್ನು ಎದುರಿಸಿತ್ತು.ಸಮಿತಿಯ ವರದಿಯನ್ನು ಪ್ರಕಟಿಸಿಲ್ಲವಾದರೂ, ಕಳೆದ ಕೆಲವು ವಾರಗಳಲ್ಲಿ ಅದರ ಅಂಶಗಳು ಸೋರಿಕೆಯಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗಿವೆ.
ಸಮಿತಿಯು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿತ್ತು. ಕ್ಯಾಂಪಸ್ ಅಥವಾ ಒಂದು ನಿರ್ದಿಷ್ಟ ಪ್ರದೇಶಗೊಳಗೆ ಅಂತಹ ಚಟುವಟಿಕೆಗಳನ್ನು ನಿಷೇಧಿಸುವುದು ನ್ಯಾಯೋಚಿತವೆಂದು ಪರಿಗಣಿಸಲ್ಪಡಬಹುದೆಂದುಅವರು ಹೇಳಿದ್ದರೆಂದು ಮಾಜಿ ಸಂಪುಟ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಸಮಿತಿಯ ವರದಿಯಲ್ಲಿ ತಿಳಿಸಿದ್ದರು.
ಆದರೆ, ಸರಕಾರವು ಹೆಚ್ಚು ಉದಾರ ಧೋರಣೆ ತಳೆದಿದೆ. ಪ್ರಜಾಪ್ರಭುತ್ವದ ಹಿತಾಸಕ್ತಿಯನ್ನು ಮುಂದಕ್ಕೊಯ್ಯುವ ಪ್ರಜಾತಂತ್ರ ವ್ಯವಸ್ಥೆ, ಆಡಳಿತ, ಪ್ರಕ್ರಿಯೆಗಳು, ಚರ್ಚೆ, ಸಮಾಲೋಚನೆ ಹಾಗೂ ಚಿಂತನೆಗಳ ಬಹುತ್ವವನ್ನು ಬಲಪಡಿಸುವಲ್ಲಿ ವಿದ್ಯಾರ್ಥಿ ಸಂಘಟನೆಗಳು ವಹಿಸುವ ಧನಾತ್ಮಕ ಪಾತ್ರವನ್ನು ಸರಕಾರವು ಪ್ರೋತ್ಸಾಹಿಸುವುದೆಂದು ಕರಡು ನೀತಿಯಲ್ಲಿ ಹೇಳಲಾಗಿದೆ.
ಆದಾಗ್ಯೂ, ವಿದ್ಯಾರ್ಥಿಗಳು ಕ್ಯಾಂಪಸ್‌ಗಳಲ್ಲಿ ಅವಧಿಗಿಂತ ಹೆಚ್ಚು ಕಾಲ ಉಳಿಯುವುದನ್ನು ತಡೆಯುವ ಕ್ರಮಗಳ ಕುರಿತು ಸರಕಾರ ಸೂಚನೆ ನೀಡಿದೆ. ಕೆಲವು ಖ್ಯಾತ ವಿವಿಗಳಲ್ಲಿ ವಿದ್ಯಾರ್ಥಿಗಳು ಪದವಿ ಪಡೆಯಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದಾರೆಂಬ ದೂರಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ವಿವಿ ಹಾಸ್ಟೆಲ್‌ನಲ್ಲಿ ಇರಬಹುದಾದ ಹಾಗೂ ತಾನು ಪ್ರವೇಶ ಪಡೆದಿರುವ ಕೋರ್ಸನ್ನು ಪೂರೈಸಬೇಕಾದ ಅವಧಿಗೆ ಮಿತಿ ಹೇರುವ ಒಲವನ್ನು ಸುಬ್ರಹ್ಮಣ್ಯನ್ ಆಯೋಗ ವ್ಯಕ್ತಪಡಿಸಿದೆ.
......................
ಭಾರತ-ಇಸ್ರೇಲ್ ಜಂಟಿ ಸಹಭಾಗಿತ್ವದಲ್ಲಿ ನೆಲದಿಂದ ಗಗನಕ್ಕೆ ಹಾರುವ ಕ್ಷಿಪಣಿ ಪರೀಕ್ಷೆ
ಹೊಸದಿಲ್ಲಿ, ಜೂ.30: ಇಸ್ರೇಲ್‌ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿರುವ ನೆಲದಿಂದ ಗಗನಕ್ಕೆ ಹಾರುವ ಹೊಸ ಕ್ಷಿಪಣಿಯೊಂದರ ಪರೀಕ್ಷೆಯನ್ನು ಭಾರತವಿಂದು ಒಡಿಶಾ ತೀರದ ರಕ್ಷಣಾ ನೆಲೆಯೊಂದರಲ್ಲಿ ಯಶಸ್ವಿಯಾಗಿ ಮಾಡಿದೆ.
ಈ ಮಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಇಂದು ಬೆಳಗ್ಗೆ 8:5ರ ವೇಳೆ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಸಂಚಾರಿ ಉಡಾವಕವೊಂದರ ಮೂಲಕ ಯಶಸ್ವಿಯಾಗಿ ಹಾರಿಸಲಾಯಿತೆಂದು ಡಿಆರ್‌ಡಿಒದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷಾ ಹಾರಾಟವು ಅದ್ಭುತವಾಗಿ ಯಶಸ್ವಿಯಾಗಿದೆ. ಕ್ಷಿಪಣಿಯು ಎಲ್ಲ ಗುರಿಗಳನ್ನು ತಲುಪಿದೆಯೆಂದು ಅವರು ಹೇಳಿದ್ದಾರೆ.
ಬಂಗಾಳ ಕೊಲ್ಲಿಯ ಮೇಲೆ ‘ಬನ್ಶೀ’ ಮಾನವ ರಹಿತ ವಿಮಾನವೊಂದರ ಬೆಂಬಲಿತ, ಆಕಾಶದಲ್ಲಿ ಚಲಿಸುತ್ತಿರುವ ಗುರಿಯನ್ನು ಭೇದಿಸುವಂತೆ ರಾಡಾರ್‌ಗಳು ಸಂಜ್ಞೆ ಕಳುಹಿಸಿದೊಡನೆಯೇ, ಐಟಿಆರ್‌ನ 3ನೆ ಉಡಾವಣಾ ವೇದಿಕೆಯಲ್ಲಿರಿಸಲಾಗಿದ್ದ ಕ್ಷಿಪಣಿಯು ಕಾರ್ಯಾಚರಣೆಗೆ ಧುಮುಕಿತೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಕ್ಷಿಪಣಿ ಮಾತ್ರವಲ್ಲದೆ, ಪತ್ತೆ, ಹಿಂಬಾಲಿಸುವಿಕೆ ಹಾಗೂ ಕ್ಷಿಪಣಿಗೆ ನಿರ್ದೇಶನ ನೀಡುವುದಕ್ಕಾಗಿ ಬಹುಕಾರ್ಯ ಕಣ್ಗಾವಲು ಹಾಗೂ ಬೆದರಿಕೆ ಎಚ್ಚರಿಕೆ ರಾಡಾರ್ ಇರುತ್ತದೆ.
ಹೈದರಾಬಾದ್‌ನಲ್ಲಿರುವ ಡಿಆರ್‌ಡಿಒದ ಪ್ರಯೋಗಾಲಯ- ಭಾರತೀಯ ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲದಲ್ಲಿ (ಡಿಆರ್‌ಡಿಎಲ್), ಇಸ್ರೇಲ್‌ನ ಏರೋಸ್ಪೇಸ್ ಇಂಡಸ್ಟ್ರೀಸ್‌ನ (ಐಎಐ) ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿತ್ತು.







