ಇಂದು ತೇಜಸ್ ವಾಯುಪಡೆಗೆ ಸೇರ್ಪಡೆ
ಬೆಂಗಳೂರು,ಜೂ.30: ಸ್ವದೇಶಿ ನಿರ್ಮಿತ ಲಘು ಸಮರ ವಿಮಾನ ತೇಜಸ್ನ ಎರಡು ವಿಮಾನಗಳು ಶುಕ್ರವಾರ ವಾಯುಪಡೆಗೆ ಸೇರ್ಪಡೆಗೊಳ್ಳಲಿದೆ. ಸರಕಾರಿ ಸ್ವಾಮ್ಯದ ಎಚ್ಎಎಲ್ ಸಂಸ್ಥೆಯು ಮೊದಲ ಎರಡು ತೇಜಸ್ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಿದೆ. ಈ ವಿಮಾನಗಳ ಸೇರ್ಪಡೆಯೊಂದಿಗೆ ‘ಫ್ಲೈಯಿಂಗ್ ಡ್ಯಾಗರ್ಸ್ 45’ ಎಂಬ ಲಘು ಸಮರ ವಿಮಾನಗಳ ಸ್ಕ್ವಾಡರ್ನ್ ಅನ್ನು ವಾಯುಪಡೆ ರಚಿಸಲಿದೆ.
ವಾಯುಪಡೆಗೆ ತೇಜಸ್ ವಿಮಾನಗಳ ಸೇರ್ಪಡೆ ಕಾರ್ಯಕ್ರಮವು, ಎಚ್ಎಎಲ್ನ ವೈಮಾನಿಕ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಏರ್ ಮಾರ್ಷಲ್ ಜಸ್ಬೀರ್ ವಾಲಿಯಾ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಾಯುಪಡೆಯ ಎಲ್ಸಿಎ ಸ್ಕ್ವಾಡರ್ನ್ ಮೊದಲ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕಾರ್ಯಾಚರಿಸಲಿದ್ದು, ನಂತರ ತಮಿಳುನಾಡಿನ ಸೂಲೂರಿಗೆ ಸ್ಥಳಾಂತರಗೊಳ್ಳಲಿದೆ.
ವಾಯುಪಡೆ ಮುಖ್ಯಸ್ಥ ಅರೂಪ್ ರಾಹಾ ಮೇ 17ರಂದು ತೇಜಸ್ ವಿಮಾನದಲ್ಲಿ ತನ್ನ ಚೊಚ್ಚಲ ಹಾರಾಟವನ್ನು ಕೈಗೊಂಡಿದ್ದರು ಹಾಗೂ ವಾಯುಪಡೆಯ ಸೇರ್ಪಡೆಗೆ ಈ ವಿಮಾನವು ಯೋಗ್ಯವಾದುದೆಂದು ತಿಳಿಸಿದರು.