ಬದುಕಿನ ಹೋರಾಟದಲ್ಲಿ ಹಾಕಿ ಕಲಿಗಳಾದ ಗೋವಿಂದ, ಶಾಹಿದ್

ಬೆಂಗಳೂರು, ಜೂ.30: ಭಾರತಕ್ಕೆ ಹಾಕಿಯಲ್ಲಿ 1975ರಲ್ಲಿ ಸ್ವರ್ಣ ತಂದು ಕೊಟ್ಟ ಹಾಕಿ ಆಟಗಾರರಾದ ಬಿ.ಪಿ. ಗೋವಿಂದ ಮತ್ತು ಮುಹಮ್ಮದ್ ಶಾಹಿದ್ ಅವರು ಇದೀಗ ಬದುಕಿನ ಸಂಧ್ಯಾ ಕಾಲದಲ್ಲಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ
65ರ ಹರೆಯದ ಗೋವಿಂದ ಪಕ್ಕೆಲುಬು ಮುರಿತದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ,56ರ ಹರೆಯದ ಮುಹಮ್ಮದ್ ಶಾಹಿದ್ ಅವರು ಲಿವರ್‌ನ ಗಂಭೀರ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದಾರೆ.
ಗೋವಿಂದ ಅವರು ಬೆಂಗಳೂರಿನಲ್ಲಿ ಕಳೆದ ವಾರ ಪಕ್ಕೇಲುಬು ಮುರಿತದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ಆದರೆ ಐಸಿಯುನಿಂದ ಹೊರಬಂದಿದ್ದರೂ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದಾರೆ. ಗುರ್ಗಾಂವ್‌ನ ಆಸ್ಪತ್ರೆಗೆ ದಾಖಲಾಗಿರುವ ಶಾಹಿದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಬನಾರಸ್ ಹಿಂದೂ ವಿವಿ ಸುಂದರ್ ಲಾಲ್ ಆಸ್ಪತೆಗೆ ಮೊದಲು ದಾಖಲಿಸಿದ್ದ ಶಾಹಿದ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಕಾರಣದಿಂದಾಗಿ ಅವರನ್ನು ಗುರ್ಗಾಂವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗೋವಿಂದ 1975ರಲ್ಲಿ ವಿಶ್ವಕಪ್ ಜಯಿಸಿದ ಹಾಕಿ ತಂಡದ ಸದಸ್ಯರಾಗಿದ್ದರು. ಕೌಲಾಲಂಪುರದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅಜಿತ್‌ಪಾಲ್ ಸಿಂಗ್ ನಾಯಕತ್ವದ ಭಾರತ ತಂಡ ಚಿನ್ನ ಜಯಿಸಿತ್ತು. ಭಾರತದ ಹಾಕಿ ತಂಡದ ಮಾಜಿ ನಾಯಕ ಗೋವಿಂದ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಮೂರು ಏಷ್ಯನ್ ಗೇಮ್ಸ್‌ಗಳಲ್ಲಿ ಅವರು ಭಾಗವಹಿಸಿದ್ದರು.
ಯುವ ತಲೆಮಾರಿನ ಮುಹಮ್ಮದ್ ಶಾಹೀದ್ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು.
ಭಾರತದ ಕ್ರಿಕೆಟ್‌ನಲ್ಲಿ ಸೌರವ್ ಗಂಗುಲಿ ಮತ್ತು ಸಚಿನ್ ತೆಂಡುಲ್ಕರ್ ಜೊತೆಗಾರಿಕೆ ಯಾವ ರೀತಿ ಇತ್ತೋ ಅದೇ ರೀತಿ ಶಾಹೀದ್ ಅವರು ಝಾಫರ್ ಇಕ್ಬಾಲ್ ಜೊತೆ ಯಾಗಿ ತಂಡದ ಯಶಸ್ವಿಗೆ ಕೊಡುಗೆ ನೀಡಿದ್ದರು. ಇವರ ತಂಡ 1982 ಮತ್ತು 1986ರ ಏಷ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿತ್ತು.
ಶಾಹಿದ್‌ಗೆ 1986ರಲ್ಲಿ ಪದ್ಮಶ್ರೀ ನೀಡಲಾಗಿತ್ತು. ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದ ಅವರು ಭಡ್ತಿಗಾಗಿ 18 ವರ್ಷಗಳ ಕಾದಿದ್ದರು





