ಗುಡ್ಡೆ ಅಂಗಡಿ: ಮನೆ ಕುಸಿತಕ್ಕೆ ಸಂಬಂಧಿಸಿ ಪರಿಹಾರ ಧನ ಚೆಕ್ ವಿತರಣೆ
ವಿಟ್ಲ, ಜು.1: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ಎಂಬಲ್ಲಿನ ವಿಧವಾ ಮಹಿಳೆ ಶರೀಫಮ್ಮ ಅವರ ಮನೆ ಕಳೆದ ಮೇ 17 ರಂದು ಬೀಸಿದ ಬಿರುಗಾಳಿಗೆ ಸಂಪೂರ್ಣ ಧರಾಶಾಹಿಯಾದ ಪ್ರಯುಕ್ತ ಸರಕಾರದಿಂದ ಮಂಜೂರಾದ 70 ಸಾವಿರ ರೂಪಾಯಿ ಪರಿಹಾರ ಧನ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಗುರುವಾರ ವಿತರಿಸಿದರು.
ಬಿರುಗಾಳಿಗೆ ಶರೀಫಮ್ಮ ಅವರ ಮನೆ ಪ್ರಾರಂಭದಲ್ಲಿ ಭಾಗಶಃ ಕುಸಿದು ಬಳಿಕ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಶರೀಫಮ್ಮ ಅತಂತ್ರರಾಗಿದ್ದರು. ಇದಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿದ್ದ ಕಂದಾಯ ಅಧಿಕಾರಿಗಳು ಪ್ರಾರಂಭದಲ್ಲಿ 5,600/- ರೂಪಾಯಿ ಚೆಕ್ ನೀಡಿ ಕೈ ತೊಳೆದುಕೊಂಡಿದ್ದರು. ಆದರೆ ಬಳಿಕ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ವಿಶೇಷ ಮುತುವರ್ಜಿಯಿಂದಾಗಿ ಸಚಿವ ರಮಾನಾಥ ರೈ ಅವರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಲಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡ ಸಚಿವ ರೈ ಅವರು ಶರೀಫಮ್ಮ ಅವರಿಗೆ ಗರಿಷ್ಠ ಮಟ್ಟದ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಹಿನ್ನಲೆಯಲ್ಲಿ ಈ ಪರಿಹಾರ ಮೊತ್ತ ವಿತರಿಸಲಾಗಿದೆ.
ಸ್ಥಳೀಯ ನಿವಾಸಿ ರಾಜೀವ ಪೂಜಾರಿ ಎಂಬವರ ಪತ್ನಿ ಶಶಿಕಲಾ ಅವರ ಮನೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿ 30 ಸಾವಿರ ರೂಪಾಯಿ ಪರಿಹಾರ ಧನ ಇದೇ ವೇಳೆ ಸಚಿವ ರೈ ವಿತರಿಸಿದರು. ಈ ಸಂದರ್ಭ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು.





