ಕಲಬುರಗಿ ಕಿರುಕುಳ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಣೆ

ಬೆಂಗಳೂರು, ಜುಲೈ 1: ಕಲಬುರಗಿಯ ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ ದಲಿತ ವಿದ್ಯಾರ್ಥಿನಿಯಾದ ಅಶ್ವತಿಯನ್ನು ಕಿರುಕುಳಕ್ಕೊಳಪಡಿಸಿದ ಪ್ರಕರಣದಲ್ಲಿ ಆರೋಪಿಗಳಾದ ಮೂವರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿ ಜಿಲ್ಲಾ ಸೆಶನ್ಸ್ ಕೋರ್ಟ್ ತಳ್ಳಿಹಾಕಿದೆ. ಕೇರಳಕ್ಕೆ ಹೋಗಿ ಅಶ್ವತಿಯ ಹೇಳಿಕೆಯನ್ನು ಪಡೆದ ತನಿಖಾ ತಂಡ ಇನ್ನೂ ವರದಿಯನ್ನು ಸಲ್ಲಿಸಿಲ್ಲ ಎಂಬ ಪ್ರಾಶಿಕ್ಯೂಶನ್ ವಾದವನ್ನು ಪುರಷ್ಕರಿಸಿದ ಕೋರ್ಟ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿದೆ.
ಈ ಮೊದಲು ಅಡಿಷನಲ್ ಕೋರ್ಟ್‌ನಲ್ಲಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶೆ. ಪ್ರೇಮಾವತಿ ಮನಗೋಳಿ ಶುಕ್ರವಾರ ಪರಿಗಣಿಸಲಿದ್ದಾರೆ. ಒಂದನೆ ಆರೋಪಿ ಲಕ್ಷ್ಮೀ,ಎರಡನೆ ಆರೋಪಿ ಆದಿರಾ.ಮೂರನೆ ಆರೋಪಿ ಕೃಷ್ಣಪ್ರಿಯರ ಪರವಾಗಿ ವಕೀಲ ಅವಿನಾಶ್ ಉಬ್ಲವನ್‌ಕರ್ ಜಾಮೀನು ಅರ್ಜಿಹಾಕಿದ್ದರು. ಪ್ರಾಶಿಕ್ಯೂಶನ್‌ಗಾಗಿ ವಕೀಲ ಸಫೀರ್ ಅಹ್ಮದ್ ವಾದಿಸಿದ್ದಾರೆ. ತನಿಖಾ ಹೊಣೆವಹಿಸಿರುವ ಡಿವೈಎಸ್ಪಿ ಪಿ.ಎ.ಎಸ್. ಝಾನ್ವಿ ನೇತೃತ್ವದ ಪೊಲೀಸರ ತಂಡ ಅಶ್ವತಿಯ ಹೇಳಿಕೆಯೊಂದಿಗೆ ಕಲಬುರಗಿಗೆ ತಲುಪಿದ್ದರೂ ವರದಿ ಸಲ್ಲಿಸಿರಲಿಲ್ಲ. ತಲೆತಪ್ಪಿಸಿಕೊಂಡಿರುವ ಪ್ರಕರಣದ ನಾಲ್ಕನೆ ಆರೋಪಿ ಕೋಟ್ಟಯಂ ಶಿಲ್ಪಾ ಜೋಸ್‌ಳ ಪತ್ತೆ ಕಾರ್ಯ ಮುಂದುವರಿದಿದೆ.





