‘‘ಅಶೋಕ ಚಕ್ರವರ್ತಿ ಬೌದ್ಧ ಧರ್ಮ ಸ್ವೀಕರಿಸುವ ಮುನ್ನ ಶ್ರೇಷ್ಠನಾಗಿದ್ದ’’
ಆರೆಸ್ಸೆಸ್ ನಿಯತಕಾಲಿಕ

ಜೈಪುರ,ಜು.1 : ಮೊಘಲ್ ದೊರೆ ಅಕ್ಬರ್ ನಂತರ ಸಂಘ ಪರಿವಾರ ಈಗ ತನ್ನ ಗಮನವನ್ನು ಅಶೋಕ ಚಕ್ರವರ್ತಿಯತ್ತ ಹರಿಸಿದೆ. ರಾಜಸ್ಥಾನದ ಆರೆಸ್ಸೆಸ್ ಸಂಯೋಜಿತ ‘ವನವಾಸಿ ಕಲ್ಯಾಣ ಪರಿಷದ್’ ತನ್ನಮುಖವಾಣಿ ‘ಬಪ್ಪಾ ರಾವಲ್’ ನ ಮೇ ಸಂಚಿಕೆಯಲ್ಲಿನ ಲೇಖನವೊಂದರಲ್ಲಿ‘‘ಅಶೋಕ ಬೌದ್ಧ ಧರ್ಮ ಸ್ವೀಕರಿಸುವ ಮುನ್ನ ಶ್ರೇಷ್ಠನಾಗಿದ್ದ’’ ಎಂದು ಹೇಳಿದೆಯಲ್ಲದೆ ‘‘ಮತಾಂತರಗೊಂಡ ನಂತರ ಆತ ಅಹಿಂಸೆಯ ಕೆಲ ತತ್ವಗಳನ್ನು ಅತಿಯಾಗಿ ಪ್ರತಿಪಾದಿಸಲು ಆರಂಭಿಸಿದ್ದ’’ ಎಂದು ಬರೆದಿದೆ.
‘‘ಅಶೋಕ ಬೌದ್ಧ ಧರ್ಮ ಸ್ವೀಕರಿಸಿ ಅಹಿಂಸೆಯನ್ನುಪ್ರತಿಪಾದಿಸಲು ಆರಂಭಿಸಿದ್ದರಿಂದಲೇ ದೇಶದ ಗಡಿಗಳು ವಿದೇಶೀ ಆಕ್ರಮಣಕಾರರಿಗೆ ತೆರೆದುಕೊಂಡವು’’ ಎಂದು ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಲಾಗಿದೆ.
ಅಶೋಕನ ಆಡಳಿತದಲ್ಲಿ ಬೌದ್ಧ ಧರ್ಮದ ಅನುಯಾಯಿಗಳುಗ್ರೀಕ್ ಆಕ್ರಮಣಕಾರರಿಗೆ ಸಹಾಯ ಹಸ್ತ ಚಾಚಿ ಅವರು‘ವೈದಿಕ ಧರ್ಮ’ ವನ್ನು ನಾಶಗೊಳಿಸಿ ಬೌದ್ಧ ಧರ್ಮದ ಪ್ರಾಬಲ್ಯಕ್ಕೆ ದಾರಿ ಮಾಡಿ ಕೊಡುವರು ಎಂದುಕೊಂಡಿದ್ದರು ಎಂದೂ ಆ ಲೇಖನದಲ್ಲಿ ಆಪಾದಿಸಲಾಗಿದೆ.
‘‘ಭಾರತದ ಅವನತಿಗೆ ಕಾರಣನಾದ ಅದೇ ಅಶೋಕ ಚಕ್ರವರ್ತಿಯನ್ನುನಾವು ಶ್ರೇಷ್ಠನೆಂದು ಪೂಜಿಸಿರುವುದು ನಿಜವಾಗಿಯೂ ದುರಾದೃಷ್ಟ. ಭಗವಾನ್ ಬುದ್ಧನಂತೆ ಚಕ್ರವರ್ತಿ ಅಶೋಕ ಕೂಡ ಭಿಕ್ಷುವಾಗಿ ಬೌದ್ಧ ಧರ್ಮದ ಪ್ರಚಾರ ಮಾಡಿದ್ದಿದ್ದರೆ ಭಾರತ ಇಷ್ಟೆಲ್ಲಾ ಕಷ್ಟ ಪಡುವ ಅಗತ್ಯವಿರಲಿಲ್ಲ,’’ ಎಂದು ಆ ಲೇಖನದಲ್ಲಿ ಹೇಳಲಾಗಿದೆ.
‘ಭಾರತ್ : ಕಲ್ , ಆಜ್ ಔರ್ ಕಲ್’ ( ಭಾರತ : ನಿನ್ನೆ, ಇಂದು, ನಾಳೆ) ಎಂಬ ಸರಣಿ ಲೇಖನ ಮಾಲೆಯ ಭಾಗವಾಗಿ ಈ ನಿಯತಕಾಲಿಕದಲ್ಲಿ ಈ ವಿವಾದಾಸ್ಪದ ಲೇಖನ ಪ್ರಕಟವಾಗಿದೆ.







