ತೆಲಂಗಾಣ: ನ್ಯಾಯಾಂಗ ಇಲಾಖೆಯ 8,000 ನೌಕರರ ಮುಷ್ಕರ

ಹೈದರಾಬಾದ್,ಜು.1: ತೆಲಂಗಾಣದಲ್ಲಿ ಪ್ರತಿಭಟನಾನಿರತ ನ್ಯಾಯಾಧೀಶರಿಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯಾದ್ಯಂತ ವಿವಿಧ ನ್ಯಾಯಾಲಯಗಳು ಮತ್ತು ನ್ಯಾಯಾಂಗ ಇಲಾಖೆಯ ಸುಮಾರು 8,000 ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನಾರಂಭಿಸಿದ್ದು,ನ್ಯಾಯಾಲಯಗಳ ಕಾರ್ಯಕಲಾಪಗಳು ವ್ಯತ್ಯಯಗೊಂಡಿವೆ.
ಇತರ ಬೇಡಿಕೆಗಳೊಂದಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳ ನಡುವೆ ನ್ಯಾಯಾಧೀಶರನ್ನು ನಿಯೋಜಿಸಿರುವ ತಾತ್ಕಾಲಿಕ ಪಟ್ಟಿಯನ್ನು ಹಿಂದೆಗೆದುಕೊಳ್ಳಬೇಕು ಮತ್ತು ಉಚ್ಚ ನ್ಯಾಯಾಲಯವನ್ನು ವಿಭಜಿಸಬೇಕು ಎನ್ನುವುದು ನೌಕರರ ಆಗ್ರಹವಾಗಿದೆ.
ರಾಜ್ಯದ ಎಲ್ಲ 10 ಜಿಲ್ಲೆಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಅಖಿಲ ಭಾರತ ನ್ಯಾಯಾಂಗ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಲಕ್ಷ್ಮಾರೆಡ್ಡಿ ತಿಳಿಸಿದರು.
ಉಚ್ಚ ನ್ಯಾಯಾಲಯವು ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ರೆಡ್ಡಿ ಮತ್ತು ಸಂಘದ ಇತರ ಎಂಟು ಪ್ರಮುಖ ಸದಸ್ಯರನ್ನು ಗುರುವಾರ ಅಮಾನತುಗೊಳಿಸಿದೆ.
ಕಳೆದ ನಾಲ್ಕು ದಿನಗಳಲ್ಲಿ ಶಿಸ್ತು ಕಾರಣಗಳಿಂದ 11 ನ್ಯಾಯಾಧೀಶರನ್ನೂ ಉಚ್ಚ ನ್ಯಾಯಾಲಯವು ಅಮಾನತುಗೊಳಿಸಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲಿ ಸುಮಾರು 200 ನ್ಯಾಯಾಧೀಶರು ಸಾಮೂಹಿಕ ರಜೆಯಲ್ಲಿ ತೆರಳಿದ್ದಾರೆ.