ಈ ಮನೆಯಲ್ಲಿ ಪ್ರತಿದಿನ 4 ಸಾವಿರ ಜನರಿಗೆ ಉಚಿತ ಬಿರಿಯಾನಿ!
ರಂಝಾನ್ ವಿಶೇಷ

ಅಬುದಾಬಿ: ಸಂಜೆ 4 ಗಂಟೆಯಾಗುತ್ತಲೇ ಅಬುದಾಬಿ ಕೊರ್ನಿಷೆ ಬಳಿ ಮನೆ ನಂಬರ್ 59ರ ಮುಕ್ತ ಪ್ರದೇಶದಲ್ಲಿ ಜನರು ಗುಂಪುಗೂಡುತ್ತಾರೆ. ಕಟ್ಟಡದ ಒಳಗಿನಿಂದ ವ್ಯಕ್ತಿಯೊಬ್ಬ ಹೊರಗೆ ಬಂದು ಸರತಿ ಸಾಲಿನಲ್ಲಿ ನಿಂತ ಜನರ ಕಡೆಗೆ ಒಮ್ಮೆ ನೋಡುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಬಿಸಿ ಬಿರಿಯಾನಿಗಳು ಮೇಜಿನ ಮೇಲೆ ಸಿದ್ಧವಾಗುತ್ತದೆ. ಭಾರತೀಯ ಮಸಾಲೆಗಳ ವಾಸನೆ ಗಾಳಿಯಲ್ಲಿ ಹರಿದಾಡುತ್ತದೆ. ಸಹಾಯಕರ ತಂಡ ಸರತಿಯಲ್ಲಿ ಪ್ಲಾಸ್ಟಿಕ್ ಬಾಕ್ಸ್, ಲೋಹದ ಪಾತ್ರೆಗಳನ್ನು ಹಿಡಿದು ನಿಂತ ವ್ಯಕ್ತಿಗಳಿಗೆ ರಂಝಾನ್ ವಿಶೇಷ ಬಿರಿಯಾನಿಯನ್ನು ಕೊಡುತ್ತಾರೆ.
ಮನೆಯ ಅಡುಗೆ ಮುಖ್ಯಸ್ಥ ಅಬ್ದುಲ್ ಖಾದರ್ ಹೇಳುವ ಪ್ರಕಾರ ರಂಝಾನ್ ಸಂದರ್ಭ ಇಲ್ಲಿ ಪ್ರತೀ ದಿನ 4000 ಮಂದಿಗೆ ಬಿರಿಯಾನಿ ಸಿದ್ಧವಾಗುತ್ತದೆ. ಮನೆಯಲ್ಲಿ ರಂಝಾನ್‌ಗೆ ಇದು ನಿತ್ಯದ ಸೇವೆ. ಮನೆ ಮಾಲೀಕ ಈ ಕೆಲಸವನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಎನ್ನುತ್ತಾರೆ ಕಳೆದ 40 ವರ್ಷದಲ್ಲಿ ಮನೆಯ ಅಡುಗೆಯ ನೇತೃತ್ವ ವಹಿಸಿರುವ ಕೇರಳ ಮೂಲದ ಅಬ್ದುಲ್ ಖಾದರ್. ವಿಶೇಷವಾಗಿ ರಂಝಾನಿಗೆ ಸಿದ್ಧವಾದ ಮನೆಯ ಅಡುಗೆ ಮನೆಯಲ್ಲಿ 25 ಅಡುಗೆಯವರು ಮತ್ತು ಸಹಾಯಕರು ಬಿರಿಯಾನಿ ಸಿದ್ಧಪಡಿಸುತ್ತಾರೆ.
ಅಡುಗೆಮನೆಯನ್ನು ನಿಭಾಯಿಸುವಲ್ಲಿ ಅಬ್ದುಲ್ ಖಾದರ್‌ಗೆ ಅವರ ಪತ್ನಿ ಸಹಾಯ ಮಾಡುತ್ತಾರೆ. ಪ್ರತೀ ನಿತ್ಯ ಇಲ್ಲಿ 450 ಕೇಜಿ ಅಕ್ಕಿ, 400 ಕೇಜಿ ಮಾಂಸ ಮತ್ತು 100 ಕೇಜಿ ತರಕಾರಿಗಳು ಬಳಕೆಯಾಗುತ್ತವೆ. ನಾವು ಬೆಳಗಿನ ಜಾವ 5 ಗಂಟೆಗೇ ಕೆಲಸ ಆರಂಭಿಸುತ್ತೇವೆ. ತರಕಾರಿ ತುಂಡರಿಸುವುದು, ಮಾಂಸ ಶುದ್ಧಮಾಡಿ ಮ್ಯಾರಿನೇಟ್ ಮಾಡುವುದು ಹೀಗೆ ತಂಡಗಳಲ್ಲಿ ಕೆಲಸ ಮಾಡುತ್ತೇವೆ. ಸಂಜೆ 3 ಗಂಟೆಗೆ ಬಿರಿಯಾನಿ ಸಿದ್ಧವಾಗುತ್ತದೆ ಎನ್ನುತ್ತಾರೆ ಖಾದರ್. ಮನೆಯ ಅಡುಗೆಯಾತ ಸಾದಿಕ್ ಉಸ್ತಾದ್ ಪ್ರಕಾರ ಇದೊಂದು ಸಾಂಘಿಕ ಕೆಲಸ ಮತ್ತು ಎಲ್ಲರಿಗೂ ಆಹಾರ ತಯಾರಿಸುವುದರಲ್ಲಿ ಖುಷಿ ಇದೆ. ಈಗ ವಿಶೇಷ ಬಿರಿಯಾನಿ ಸಿದ್ಧಪಡಿಸುವುದು ನಮ್ಮ ರಂಝಾನ್ ಉಪವಾಸದಷ್ಟೇ ಮುಖ್ಯ ಭಾಗವಾಗಿದೆ ಎನ್ನುವ ಉಸ್ತಾದ್ ಈ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಉಚಿತ ಬಿರಿಯಾನಿ ಬಹುದೊಡ್ಡ ಪ್ರಚಾರ ಪಡೆದುಕೊಂಡಿದೆ. ನನ್ನ ಸ್ನೇಹಿತನೊಬ್ಬ ಹೇಳಿದ ಮೇಲೆ ಇಲ್ಲಿಗೆ ನಿತ್ಯವೂ ಬರುತ್ತೇನೆ ಎನ್ನುತ್ತಾರೆ ಪಾಕಿಸ್ತಾನಿ ಸೇಲ್ಸ್‌ಮ್ಯಾನ್ ಮೊಹಮ್ಮದ್ ಹನೀಫ್. ಭಾರತೀಯ ಚಾಲಕ ನೌಶದ್ ಕೂಡ ಇಲ್ಲಿಗೆ ನಿತ್ಯವೂ ಬಿರಿಯಾನಿ ಪಾರ್ಸಲ್ ಕೊಂಡು ಹೋಗಲು ಬರುತ್ತಾರೆ. ನಾನು ನಗರಕ್ಕೆ ಹೊಸಬ. ಸ್ನೇಹಿತರೊಬ್ಬರು ಇಲ್ಲಿನ ಬಿರಿಯಾನಿ ಪರಿಚಯಿಸಿದರು. ನಾನು ಕೂಡ ಇದಕ್ಕೆ ಹೊಂದಿಕೊಂಡಿರುವೆ. ಕೆಲಸ ಮುಗಿಸಿ ಮನೆಗೆ ಹೋಗಿ ಅಡುಗೆ ಮಾಡಲು ಸಮಯವಿರುವುದಿಲ್ಲ. ಹೀಗಾಗಿ ಇಲ್ಲೇ ಪ್ಯಾಕ್ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ನೌಶದ್.
ಪಾಕಿಸ್ತಾನ ಮೂಲದ ರಝವುಲ್ಲ ಅಬುದಾಬಿಯ್ಲಲಿ ಉದ್ಯೋಗ ಅರಸುತ್ತಿದ್ದಾರೆ. ರಂಝಾನ್ ಸಂದರ್ಭ ಇಲ್ಲೇ ಬಿರಿಯಾನಿ ಸೇವಿಸುತ್ತಾರೆ. ನನ್ನ ಬಳಿ ಹಣ ಅಥವಾ ಉದ್ಯೋಗ ಎರಡೂ ಇಲ್ಲ. ಹೀಗಾಗಿ ಬಿರಿಯಾನಿ ಬಹಳ ಉಪಯೋಗವಾಗಿದೆ ಎನ್ನುತ್ತಾರೆ ರಝವುಲ್ಲಾ. ಇಲ್ಲಿಂದ ಬಿರಿಯಾನಿ ತೆಗೆದುಕೊಂಡು ಹೋಗುವವರು ಅದರ ರುಚಿಗಾಗಿಯೂ ಮತ್ತೆ ಮತ್ತೆ ಬರುತ್ತಾರೆ. ಇತರ ಹಲವು ಬಿರಿಯಾನಿಗಿಂತ ಇಲ್ಲಿನದು ರುಚಿಯಾಗಿದೆ ಎನ್ನುತ್ತಾರೆ ಬಾಂಗ್ಲಾದೇಶ ಮೂಲದ ಉದ್ಯಾನ ಮಾಲಿ ಅಮಿನುಲ್ಲಾ. ಮನೆ ಮಾಲೀಕ ಹೇಳುವ ಪ್ರಕಾರ ಅವರಿಗೆ ಪ್ರಚಾರದ ಅಗತ್ಯವಿಲ್ಲ. ಸೇವೆಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಧರ್ಮ. ನಮ್ಮ ನಾಯಕರಾದ ಶೇಖ್ ಝಾಯೆದ ಮೊದಲಾದವರು ಇದನ್ನು ಕಲಿಸಿದ್ದಾರೆ. ಸಹಾಯ ಮಾಡುವುದು ನಮ್ಮ ಕರ್ತವ್ಯ. ಇಲ್ಲಿ ಯಾವ ಧರ್ಮದವರು ಬೇಕಾದರೂ ಬಂದು ಆಹಾರ ಪಡೆಯಬಹುದು. ಧರ್ಮದ ಭೇದ ಭಾವ ನಾವು ಮಾಡುವುದಿಲ್ಲ ಎನ್ನುತ್ತಾರೆ ಅಬುದಾಬಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿರುವ ಮನೆ ಮಾಲೀಕ.

ಕೃಪೆ: http://gulfnews.com/xpress







