ಯಕ್ಷಗಾನ ಶ್ರೀಮಂತ ಸಂಸ್ಕೃತಿಯ ಒಂದು ಭಾಗ: ಸುಬ್ರಾಯ

ಮಡಿಕೇರಿ, ಜು.1: ಕರ್ನಾಟಕದ ಶ್ರೀಮಂತ ಸಂಸ್ಕೃತಿಗಳಲ್ಲಿ ಯಕ್ಷಗಾನವೂ ಒಂದು ಭಾಗವಾಗಿದ್ದು, ಇದಕ್ಕೆ ನಿರೀಕ್ಷಿತ ಪ್ರೋತ್ಸಾಹ ದೊರೆಯದಿರುವುದು ವಿಷಾದಕರವೆಂದು ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿ ಅವರು ಮಾತನಾಡಿದರು.
ಕೊಡಗಿನಲ್ಲಿ ಯಕ್ಷಗಾನ ಕಲೆ ನೆಲೆಯೂರುವುದಕ್ಕೂ ಮೊದಲು ಸ್ಥಳೀಯರಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸುವುದು ಅಗತ್ಯವಾಗಿದೆ. ಹಿಂದೆ ಮಡಿಕೆೇರಿ ದಸರಾ ಉತ್ಸವದ ಸಂದರ್ಭ ಯಕ್ಷಗಾನ ಕಾರ್ಯಕ್ರಮ ನೀಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಆಯೋಜಕರು, ಅದು ದಕ್ಷಿಣ ಕನ್ನಡದ ಕಲೆಯಾಗಿದ್ದು, ಅದರ ಪ್ರದರ್ಶನ ಬೇಡವೆಂದಿದ್ದರು ಎಂದು ವಿಷಾದಿಸಿದ ಸುಬ್ರಾಯ ಸಂಪಾಜೆ, ಕನ್ನಡ ನೆಲದ ಸಂಪದ್ಭರಿತ ಕಲೆಯಾದ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದರು.
ಯಕ್ಷಗಾನವೆನ್ನುವುದು ಸರ್ವಾಂಗೀಣವಾದ ಕಲೆಯಾಗಿದ್ದರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜನರನ್ನು ಈ ಕಲೆ ಆವರಿಸಿರುವಂತೆ ಕೊಡಗಿನ ಜನರನ್ನು ಆಕರ್ಷಿಸಿಲ್ಲ. ಜಿಲ್ಲೆಯಲ್ಲಿ ಕೇವಲ ಯಕ್ಷಗಾನ ಮಾತ್ರವಲ್ಲ ಲಲಿತ ಕಲೆಗಳನ್ನು ಪ್ರದರ್ಶಿಸಿದರೂ ನಿರೀಕ್ಷಿತ ಪ್ರೋತ್ಸಾಹ ದೊರಕುತ್ತಿಲ್ಲ. ಇಂತಹ ಸಂಕಷ್ಟಗಳ ನಡುವೆಯೂ ಭಾಗಮಂಡಲದ ಮಹಾಬಲೇಶ್ವರ ಭಟ್ ಈ ನೆಲದಲ್ಲಿ ಯಕ್ಷಗಾನ ಕಲೆಯನ್ನು ಅರಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವೆಂದು ಸುಬ್ರಾಯ ಸಂಪಾಜೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರದ ಓಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್, ಈ ನೆಲದ ಅಚ್ಛ ಸ್ವಚ್ಛವಾದ ಕನ್ನಡವನ್ನು ಉಳಿಸುವ ಕಲೆ ಯಕ್ಷಗಾನ ಕಲೆಯಾಗಿದೆ. ಭಾರತೀಯ ಪರಂಪರೆ, ಇತಿಹಾಸ, ಪೌರಾಣಿಕ ವಿಚಾರಗಳೊಂದಿಗೆ ಧಾರ್ಮಿಕತೆಯನ್ನು ಅತ್ಯಂತ ಸರಳವಾಗಿ ಹಾಡು, ನೃತ್ಯ ಮತ್ತು ನಾಟಕವನ್ನು ಒಳಗೊಂಡಂತೆ ಪ್ರದರ್ಶಿಸುವ ಕಲೆ ಯಕ್ಷಗಾನವಾಗಿದ್ದು, ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಅತ್ಯಂತ ಪ್ರಾಚೀನವಾದ ಯಕ್ಷಗಾನ ಕಲೆಯನ್ನು ಜಿಲ್ಲೆಯ ಜನತೆ ತಿರಸ್ಕರಿಸಿಲ್ಲ. ಬದಲಾಗಿ, ಈ ಕಲೆಯ ಬಗ್ಗೆ ಸ್ಥಳೀಯವಾಗಿ ಹೆಚ್ಚಿನ ಪ್ರೋತ್ಸಾಹ ಉತ್ತೇಜನ ನೀಡಬೆೇಕಾಗಿದೆ. ಅಕಾಡಮಿ ವತಿಯಿಂದ ಅರೆಭಾಷೆಯ ಯಕ್ಷಗಾನ ಪ್ರದರ್ಶನ ಮಾಡಿದ್ದು, ಕಲೆಯನ್ನು ಮತ್ತಷ್ಟು ಬೆಳೆೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ಮಿತ್ತೂರು ಈಶ್ವರ ಭಟ್, ಉದ್ಯಮಿ ಡಾ. ಜಯಂತಿ ಆರ್.ಶೆಟ್ಟಿ, ಯಕ್ಷಗಾನ ಪ್ರಸಾಧನ ಕಲಾವಿದ ದೇವಕಾನ ಕೃಷ್ಣ ಭಟ್, ಓಂಕಾರೇಶ್ವರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಮಹಾಬಲೇಶ್ವರ ಭಟ್ ಮಾತನಾಡಿದರು.
ಸುಮಾರು 12 ಗಂಟೆಗಳ ನಿರಂತರ ಕಾರ್ಯಕ್ರಮದಲ್ಲಿ ವಿವಿಧ ಯಕ್ಷಗಾನ ಪ್ರಸಂಗ, ಮಹಿಳಾ ಯಕ್ಷಗಾನ, ಬೊಂಬೆಯಾಟ ಹಾಗೂ ಯಕ್ಷಗಾನದ ಬಗ್ಗೆ ಉಪನ್ಯಾಸ ನಡೆಯಿತು. ಯಕ್ಷಗಾನ ಕಲಾವಿದರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.







