ಅಂಕೋಲಾ: ಲಕ್ಷಾಂತರ ರೂ. ಅವ್ಯವಹಾರ
ಅಂಕೋಲಾ, ಜು.1: ತಾಲೂಕಿನ ಶೆಟಗೇರಿ ಅಂಚೆ ಕಚೆೇರಿಯ ಉಪ ಅಂಚೆ ಪಾಲಕನೋರ್ವನಿಂದ ಗ್ರಾಹಕರ ಪಾಸ್ ಪುಸ್ತಕದಿಂದ ಲಕ್ಷಾಂತರ ರೂ. ಅವ್ಯವಹಾರ ಮಾಡಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಲ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಬಾಳಿಗುಳಿಯ ಮಾಣಿಕಭಾಗ ಸಮೀಪದ ನಿವಾಸಿ ಅರವಿಂದ ಆನಂದು ನಾಯ್ಕ ಎಂಬಾತ ಅವ್ಯವಹಾರ ನಡೆಸಿದ ಉಪ ಅಂಚೆ ಪಾಲಕ. ಈತ ಕೆಲವು ಗ್ರಾಹಕರ ಉಳಿತಾಯ ಪಾಸ್ ಪುಸ್ತಕಗಳಲ್ಲಿ ಹಣ ಜಮಾ ಮಾಡಿದ್ದು, ಅದೇ ರೀತಿಯಲ್ಲಿ ಲೆಡ್ಜರ್ ಬಾಕಿಯಲ್ಲಿ ದಾಖಲಾಗದೇ ಇರುವುದರಿಂದ ಕೆಲ ಗ್ರಾಹಕರು ವಿಭಾಗೀಯ ಅಂಚೆಕಚೆೇರಿಗೆ ದೂರು ಸಲ್ಲಿಸಿದರು. ಈ ಪ್ರಕರಣದ ತನಿಖಾ ಅಧಿಕಾರಿಯಾಗಿ ಸಹಾಯಕ ಅಂಚೆ ಅಧೀಕ್ಷಕ ಮೋಹನ ಬಿ. ಶೆಟಗೇರಿ ಅಂಚೆ ಕಚೆೇರಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಲಕ್ಷಾಂತರ ರೂ. ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಅಂಚೆಕಚೇರಿಗೆ ಸಂಬಂಧಿಸಿದಂತೆ ಬಾಸಗೋಡ, ಮಂಜಗುಣಿ, ಬೆಳಂಬಾರ, ಹಿಚ್ಕಡ, ಹಡವ ಸೇರಿದಂತೆ 5 ಉಪ ಶಾಖೆಗಳಿದ್ದು, ಈ ಶಾಖೆಗಳ ವ್ಯವಹಾರ ದಾಖಲೆಗಳನ್ನು ಪರಶೀಲಿಸುತ್ತೇವೆ. ಗ್ರಾಹಕರ ಹಣ ಸಂದಾಯ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಪತ್ರಿಕೆ ಅಂಚೆ ಅಧೀಕ್ಷಕ ಜೆ.ಎಫ್ ಶೇಖರ್‌ರನ್ನು ಸಂಪರ್ಕಿಸಿದಾಗ ತನಿಖಾ ಅಧಿಕಾರಿ ನೀಡಿರುವ ವರದಿಯ ಆಧಾರ ಮೇಲೆ ಅರವಿಂದ ನಾಯ್ಕನನ್ನು ಅಮಾನತು ಮಾಡಲಾಗುವುದು. ಅಲ್ಲದೇ ಗ್ರಾಹಕರ ಪಾಸ್ ಪುಸ್ತಕದಲ್ಲಿ ದಿನಾಂಕದ ಅಂಚೆ ಮುದ್ರೆಯೊಂದಿಗೆ ಹಣ ಜಮಾ ಇರುವುದನ್ನು ಖಂಡಿತಾ ಅವರಿಗೆ ವಾಪಸ್ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕುಮಟಾ ಪ್ರಭಾರ ಅಂಚೆ ನಿರೀಕ್ಷಕ ಲಕ್ಷ್ಮಣ ನಾಯ್ಕ, ಮೇಲ್ವಿಚಾರಕ ಗಣೇಶ್ ಸಿ. ತೆರನಮಕ್ಕಿ, ಸಿಬ್ಬಂದಿ ಶಾಂತಿ ವಿ. ಶೆಟ್ಟಿ, ದೇವು ಹಮ್ಮು ಗೌಡ, ರಾಜಶ್ರೀ ನಾಯಕ, ಗ್ರಾಹಕರಾದ ಸವಿತಾ ಎಂ. ನಾಯ್ಕ, ದೇವಿದಾಸ ಶಂಕರ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.





