ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿಲ್ಲ: 2018 ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ

ಮಡಿಕೇರಿ,ಜು.1: ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆಗಳಿಲ್ಲವೆಂದು ಸ್ಪಷ್ಟಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೆೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ಜೊತೆ ಎಲ್ಲಾ ಶಾಸಕರು ಸಮನ್ವಯತೆಯಿಂದ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಹೊಟೇಲ್ ವ್ಯಾಲಿವ್ಯೆನಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಲು ಪಣತೊಡಬೇಕೆಂದು ಕರೆ ನೀಡಿದರು.
ರಾಜಕೀಯ ಪಕ್ಷದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿರುವುದು ಸಹಜ. ಆದರೆ, ಕಾಂಗ್ರೆಸ್‌ನಲ್ಲಿ ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲ, ಕೇವಲ ಮಾಧ್ಯಮಗಳಲ್ಲಷ್ಟೆ ದೊಡ್ಡದಾಗಿ ಪ್ರತಿಬಿಂಬಿಸಲಾಗಿದೆ. ಪಕ್ಷದಲ್ಲಿ ಎಲ್ಲಾ ನಾಯಕರು ಒಗ್ಗಟ್ಟಿನಲ್ಲಿದ್ದು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದೆಂದು ತಿಳಿಸಿದರು. ನಮ್ಮಲ್ಲಿ ಒಡಕು ಮೂಡಿದರೆ ಇನ್ನೊಬ್ಬರಿಗೆ ಲಾಭವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಮಾತನಾಡಿ, ಕೊಡಗಿನ ಅಭಿವೃದ್ಧಿಗೆ ತಾವು ಬದ್ಧವಾಗಿದ್ದು, ಪ್ರತಿಯೊಂದು ಸಮಸ್ಯೆಯನ್ನು ಹಂತಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಗೆಹರಿಸಲಾಗದ ಯಾವುದೇ ಸಮಸ್ಯೆಗಳು ಇಲ್ಲದಿರುವುದರಿಂದ ತಾಳ್ಮೆಯಿಂದ ಪರಿಹಾರಕ್ಕಾಗಿ ಎದುರು ನೋಡಬೇಕೆಂದು ಮನವಿ ಮಾಡಿದರು. ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವು ಮುಂದುವರಿಸುವುದಲ್ಲದೆ, ಇನ್ನಷ್ಟು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು.
ಈ ಹಿಂದೆ ಕೊಡಗು ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಕೊಡಗನ್ನು ಕಾಂಗ್ರೆಸ್‌ನ ಭದ್ರಕೋಟೆ ಎನ್ನುವುದನ್ನು ಸಾಬೀತು ಪಡಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಹುಸೈನ್, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಪ್ರೇಂ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಟ್ಟು ಚಂಗಪ್ಪ, ಕೆ.ಪಿ. ಚಂದ್ರಕಲಾ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಮಾಜಿ ಶಾಸಕ ಎಚ್.ಡಿ. ಬಸವರಾಜು, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ನಗರಸಭಾ ಅಧ್ಯಕ್ಷೆ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ದಿನೆೇಶ್ ಗುಂಡೂರಾವ್, ಉಸ್ತುವಾರಿ ಸಚಿವರಾದ ಸೀತಾರಾಮ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರಿಗೆ ಪೇಟ ತೊಡಿಸಿ, ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು.







