ಕಂದಾಯ ಇಲಾಖೆಗೆ ಶಸ್ತ್ರಚಿಕಿತ್ಸೆ ಅಗತ್ಯ: ಸಚಿವ ಕಾಗೋಡು
ತಾಲೂಕು ಪತ್ರಕರ್ತರ ಸಂಘದಿಂದ ಮಾಧ್ಯಮ ಸಂವಾದ ಕಾರ್ಯಕ್ರಮ

ಸಾಗರ,ಜು.1: ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗನಿಂದ ಹಿಡಿದು ವಿಧಾನಸೌಧದವರೆಗೂ ಬಿಗಿ ತಪ್ಪಿದೆ. ಮುಂದಿನ ಎರಡು ವರ್ಷದಲ್ಲಿ ಕಂದಾಯ ಇಲಾಖೆಯನ್ನು ಕಟ್ಟುನಿಟ್ಟಾಗಿ ರಿಪೇರಿ ಮಾಡುವ ನಿಟ್ಟಿನಲ್ಲಿ ಅಗತ್ಯ ಗಮನ ಹರಿಸಲಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪತಿಳಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ, ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾನು ಸಕ್ರೀಯ ರಾಜಕಾರಣದ ಕೊನೆಘಟ್ಟದಲ್ಲಿದ್ದೇನೆ. ಕಂದಾಯ ಸಚಿವನಾಗಿ ಕೆಲವು ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದು ಜನರಿಗೆ ಭೂಮಿಹಕ್ಕು ಕೊಡಲು, ಭೂಗಳ್ಳರ ವಿರುದ್ಧ್ದ ಸಮರ ಸಾರಲು ಯಾವುದೇ ಮುಲಾಜು ಮಾಡುವುದಿಲ್ಲ. ನನಗೆ ವೈಯಕ್ತಿಕ ಹಿತಾಸಕ್ತಿ, ಬೀಗರು, ನೆಂಟರೂ ಯಾರೂ ಇಲ್ಲ. ರಾಮಸ್ವಾಮಿ ಹಾಗೂ ಟಿ.ಬಾಲಸುಬ್ರಹ್ಮಣ್ಯ ವರದಿಯನ್ನು ತರಿಸಿಕೊಂಡು ಅದನ್ನು ಅಧ್ಯಯನ ನಡೆಸಿ ಕಾಯ್ದೆ ಬದಲಾವಣೆಗೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಬೆಂಗಳೂರಿನ ಸುತ್ತಮುತ್ತಲಿನ 10 ಕಿ.ಮೀ. ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಿಸಲಾಗಿದೆ. ಆದರೂ ಬೇರೆ ಬೇರೆ ಉದ್ದೇಶಕ್ಕೆ ಭೂಮಿಯನ್ನು ಉಪಯೋಗಿಸಲಾಗುತ್ತಿದೆ. ನೋಡುವವರೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಅನೇಕ ಸವಾಲುಗಳ ನಡುವೆಯೇ ಸರಕಾರ ಕೊಟ್ಟಿರುವ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ಮಾಡುವ ಅಗತ್ಯವಿದೆ. 192 ಎ ಹಾಗೂ ಭೂಮಿತಿ ಶಾಸನದ ಬಗ್ಗೆ ಸಹ ಚರ್ಚೆ ಕೇಳಿ ಬರುತ್ತಿದೆ. ಇದನ್ನು ಸಚಿವ ಸಂಪುಟ ಸಭೆಯ ಮುಂದೆ ತಂದು ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು. ಭೂಗಳ್ಳರ ಕೈನಿಂದ ಸರಕಾರಿ ಭೂಮಿಯನ್ನು ಉಳಿಸುವುದು ಹಾಗೂ ಭೂಹೀನರಿಗೆ ಭೂಮಿ ಕೊಡುವುದು ನನ್ನ ಎದುರಿರುವ ಪ್ರಮುಖ ಕೆಲಸವಾಗಿದೆ. ಸಂದರ್ಭ ಬಂದರೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಹ ಚಿಂತನೆ ನಡೆಸಲಾಗುತ್ತದೆ ಎಂದರು.
ಕಳೆದ 15 ವರ್ಷದಿಂದ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ನೇಮಕವಾಗಿಲ್ಲ. ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಭಡ್ತಿಯಾಗಿ ಬಂದವರು ತಹಶೀಲ್ದಾರ್ ಆಗುತ್ತಿದ್ದು, ಕೆಲವು ಕಾನೂನಿನ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಈ ನಿಟ್ಟಿನಲ್ಲಿ ತಹಶೀಲ್ದಾರ್ ನೇಮಕಕ್ಕೆ ಗಮನ ಹರಿಸಲಾಗುತ್ತದೆ ಎಂದರು. ಮರಳು ಪೂರೈಕೆಗೆ ಸಮಗ್ರ ನೀತಿ ಅನುಸರಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಹಿಂದೆ ರಮೇಶಕುಮಾರ್ ಅವರು ಇದಕ್ಕಾಗಿ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಬೇರೆ ಕಾರಣದಿಂದ ಅದಕ್ಕೆ ರಾಜೀನಾಮೆ ನೀಡಿದ್ದಾರೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಮಧ್ಯಂತರ ಹಾಗೂ ಅಂತಿಮ ವರದಿಯನ್ನು ಸಮಿತಿ ನೀಡಿದೆ. ಅದನ್ನು ಪರಿಶೀಲನೆ ನಡೆಸಿ ಸೂಕ್ತ ಮರಳು ನೀತಿಯನ್ನು ರೂಪಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.







