‘ಜನರ ಸ್ಥಿತಿ ಅರಿತು ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ

ಚಿಕ್ಕಮಗಳೂರು,ಜು.01:ಸಾರ್ವಜನಿಕ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಜನ ಸಾಮಾನ್ಯರ ವಾಸ್ತವ ಸ್ಥಿತಿ ಅರಿತು ಸಕಾಲದಲ್ಲಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕಿವಿ ಮಾತು ಹೇಳಿದರು.
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸರಕಾರಿ ಇಲಾಖೆ ವತಿಯಿಂದ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರಕಾರಿ ಸೇವೆ ಮಾಡುವಾಗ ಕಾನೂನು ವ್ಯಾಪ್ತಿಯೊಳಗೆ ನಿಯಮಾನುಸಾರವಾಗಿ ಹಾಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದು ಸೂಕ್ತ. ಸಮಾಜದಲ್ಲಿ ಎಲ್ಲರೂ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಎಂದರು.
ನಾನು ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸುವಾಗ ಕಂದಾಯ ಇಲಾಖೆಗೆ ಹೆಚ್ಚು ಒತ್ತು ಕೊಡಲಿಲ್ಲ ಎಂಬ ಕೊರಗು ಇದೆ ಎಂದ ಅವರು, ಕಂದಾಯ ಇಲಾಖೆಯ ಕಾರ್ಯಗಳನ್ನು ನೋಡಲು ಒಬ್ಬ ಉತ್ತಮ ಜಿಲ್ಲಾಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಒಂದು ವರ್ಷದಿಂದ ಎಲ್ಲ ಇಲಾಖೆಯವರು ಉತ್ತಮವಾಗಿ ಕೆಲಸ ನಿರ್ವಹಿಸಿ ಸಹಕಾರ ನೀಡಿದ್ದಾರೆ ಇದಕ್ಕೆ ತಾನು ಕೃತಜ್ಞತೆ ತಿಳಿಸುತ್ತೇನೆ ಎಂದ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಇದಕ್ಕೆ ಅವರ ಅನುಭವವೇ ಕಾರಣ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಕರ್ತವ್ಯ ನಿರ್ವಸಲಿ ಎಂದು ಶುಭ ಕೋರಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ರಾಗಪ್ರಿಯಾ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜಯ್ಯ, ತಹಶೀಲ್ದಾರರಾದ ಶಾರದಾಂಬ, ಪದ್ಮನಾಭ ಶಾಸ್ತ್ರಿ ಹಾಗೂ ಮತ್ತಿತರರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.







