ಜಿಲ್ಲಾಧಿಕಾರಿ ನಮಗೆ ಆಸರೆಯಾಗಿದ್ದರು: ದಸಂಸ

ಚಿಕ್ಕಮಗಳೂರು,ಜು.1 ಅತಿಕ್ರಮಣ ಗೊಂಡಿದ್ದ, ತಮ್ಮ ಜೀವನಾಧಾರವಾದ ಭೂಮಿಯನ್ನು ತೆರವುಗೊಳಿಸಿ ತಮಗೆ ಹಿಂದಿರುಗಿಸುವ ಮೂಲಕ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ ಅವರನ್ನು ತರೀಕೆರೆ ತಾಲೂಕಿನ ಗುಡ್ಡದ ಬಸವನಹಳ್ಳಿಯ ದಲಿತರು ಶುಕ್ರವಾರ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಗುಡ್ಡದ ಬಸವನಹಳ್ಳಿಯ 45ದಲಿತ ಕುಟುಂಬಗಳಿಗೆ ತಲಾ 2ಎಕರೆಯಂತೆ 90ಎಕರೆ ಭೂಮಿಯನ್ನು ರಾಜ್ಯ ಸರಕಾರ ಈ ಹಿಂದೆ ಮಂಜೂರು ಮಾಡಿತ್ತು. ಆದರೆ ಕೆಲ ಸವರ್ಣಿಯರು ಅದನ್ನು ಅತಿಕ್ರಮಣ ಮಾಡಿದ್ದರಿಂದಾಗಿ ಜೀವನಾಧಾರವಾದ ಭೂಮಿ ಇಲ್ಲದೆ ದಲಿತ ಬಡ ಕುಟುಂಬಗಳು ಪರದಾಡುತ್ತಿದ್ದವು. ಕೆಲ ತಿಂಗಳ ಹಿಂದೆ ಈ ಕುರಿತು ದಲಿತರಿಂದ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ ಅವರು, ಯಾವ ಮುಲಾಜಿಗೂ ಬಗ್ಗದೆ ಸವರ್ಣಿಯರಿಂದ ಆ ಭೂಮಿಯನ್ನು ಬಿಡಿಸಿ ದಲಿತ ಕುಟುಂಬಗಳಿಗೆ ದೊರಕಿಸಿ ಕೊಡುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದಾರೆ.
ತಮ್ಮ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿಗಳು ವರ್ಗಾವಣೆಗೊಂಡಿರುವ ವಿಷಯ ತಿಳಿದ ದಲಿತರು ಶುಕ್ರವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಎಸ್.ಪಿ.ಷಡಕ್ಷರಿಸ್ವಾಮಿ ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿದರು.
ತಮಗೆ ಭೂಮಿ ದೊರಕಿಸಿ ಕೊಟ್ಟ ಹಿನ್ನೆಲೆಯಲ್ಲಿ ಡಿ.ಸಿ. ಅವರಿಗೆ ಕೃತಜ್ಞತೆ ಸಲ್ಲಿಸಿದ ದಲಿತರು ನಿಮ್ಮಿಂದಾಗಿ ನಾವುಗಳು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ ಎಂದು ತಿಳಿಸಿದರು.





