ಕಾರವಾರ: ಜಿಪಂನ ಬಂಪರ್ ಕೊಡುಗೆ
754 ಕೋಟಿ ರೂ. ಆಯವ್ಯಯಕ್ಕೆ ಅನುಮೋದನೆ

ಕಾರವಾರ, ಜು. 1: ಜಿಪಂನ 2016-17ನೆ ಸಾಲಿನಲ್ಲಿ ಒಟ್ಟು 754 ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಲಭಿಸಿದೆ. ಸಭೆಯಲ್ಲಿ ಈ ಸಂಬಂಧ ಆಯವ್ಯಯ ಮಂಡಿಸಿ, ಮಾಹಿತಿ ನೀಡಿದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಯೋಜನೆ ಲೆಕ್ಕ ಶೀರ್ಷಿಕೆಯಡಿ 272 ಕೋಟಿ ರೂ. ಹಾಗೂ ಯೋಜನೇತರ ಲೆಕ್ಕ ಶೀರ್ಷಿ ಕೆಯಡಿ 481 ಕೋಟಿ ರೂ. ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಕಾರ್ಯಕ್ರಮಗಳಿಗೆ ಯೋಜನೆಯಡಿ 113 ಕೋಟಿ ರೂ. ಮತ್ತು ಯೋಜನೇತರದ ಅಡಿ 131ಕೋಟಿ ರೂ., ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಯೋಜನೆಯಡಿ 135 ಕೋಟಿ ರೂ. ಹಾಗೂ ಯೋಜನೇತರದ ಅಡಿ 349 ಕೋಟಿ ರೂ. ಗ್ರಾಪಂಗಳಿಗೆ ಒಟ್ಟು 24.39 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.
ಯೋಜನೇತರ ಶೀರ್ಷಿಕೆಯಡಿ ಜಿಪಂ ಹಾಗೂ ತಾಪಂ ಅಧಿಕಾರಿ ನೌಕರರ ವೇತನಕ್ಕಾಗಿ 373 ಕೋಟಿ ರೂ. ನಿಗದಿಪಡಿಸಲಾಗಿದೆ. ಯೋಜನೆ ಲೆಕ್ಕ ಶೀರ್ಷಿಕೆಯಡಿ 249ಕೋಟಿ ರೂ. ರಾಜ್ಯದ ಹಾಗೂ 23ಕೋಟಿ ರೂ. ಕೇಂದ್ರದ ಪಾಲಾಗಿದೆ. ಯೋಜನೆ ಅಡಿ ಕಳೆದ ವರ್ಷಕ್ಕಿಂತ 16 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದ್ದು, ಯೋಜನೇತರ ಯೋಜನೆಗಳಡಿ ಕಳೆದ ಸಾಲಿಗಿ ಂತ 11 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ, ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ, ವಿಶೇಷ ಘಟಕ ಯೋಜನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ವಯಸ್ಕರ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸೇವೆ, ಗ್ರಾಮೀಣ ನೀರು ಪೂರೈಕೆ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೌಷ್ಟಿಕ ಆಹಾರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಹಕಾರ, ಪ್ರದೇಶಾಭಿವೃದ್ಧಿ ಮತ್ತು ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ, ಸಣ್ಣ ನೀರಾವರಿ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು, ರೇಷ್ಮೆ, ರಸ್ತೆ ಮತ್ತು ಸೇತುವೆಗಳು, ಕೈಮಗ್ಗ ಮತ್ತು ಜವಳಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ವಲಯಗಳಿಗೆ ಹೆಚ್ಚಿನ ಅನುದಾನವನ್ನು ಈ ಬಾರಿ ಮೀಸಲಿಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್,ಜಿಪಂನ ಸದಸ್ಯರು, ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.







