ಉದ್ಯೋಗ ಖಾತರಿಗೆ ಹೆಚು್ಚ ಅನುದಾನ ವ್ಯಯಿಸಿ
ಅಭಿನಂದನೆ ಸ್ವೀಕರಿಸಿ ಕಾಗೋಡು ಸೂಚನೆ
.jpg)
ಸಾಗರ, ಜು.1: ಕಳೆದ ವರ್ಷ ಉದ್ಯೋಗಖಾತರಿ ಯೋಜನೆಯಲ್ಲಿ ಸುಮಾರು 9 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಸಾಲಿನಲ್ಲಿ ಕನಿಷ್ಠ 30 ಕೋಟಿ ರೂ. ವ್ಯಯಿಸುವಂತೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿನ ತಾಪಂನಲ್ಲಿ ಶುಕ್ರವಾರ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತ ನಾಡುತ್ತಿದ್ದರು.
ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಒಂದು ಆಶ್ರಯ ನಿವೇಶನಕ್ಕೆ ಸಂಬಂಧಪಟ್ಟಂತೆ ಹಕ್ಕುಪತ್ರಗಳನ್ನು ನೀಡಿಲ್ಲ. ಆಶ್ರಯ ನಿವೇಶನ ಕೋರಿ ಸಾವಿರಾರು ಜನರು ಅರ್ಜಿ ಸಲ್ಲಿಸಿ ದ್ದಾರೆ. ಅವರಿಗೆ ನಿವೇಶನ ನೀಡುವುದು ನಮ್ಮ ಕರ್ತವ್ಯ. ಮುಂದಿನ ಒಂದು ತಿಂಗಳಲ್ಲಿ ನಿವೇಶನ ನೀಡಲು ಅಗತ್ಯವಾದ ಭೂಮಿಯನ್ನು ಗುರುತಿಸಿಸಲಾಗುವುದು. ಅಲ್ಲದೆ, ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕೆಲವರಿಗೆ ಹಕ್ಕುಪತ್ರ ಗಳನ್ನು ವಿತರಿಸಲಾಗಿದೆ. ಉಳಿದವರಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡುವುದು ನಮ್ಮ ಆದ್ಯ ಕರ್ತವ್ಯ. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರನ್ನು ಗುರುತಿಸಬೇಕು. ಅರ್ಜಿ ಸಲ್ಲಿಸದಿದ್ದವರು ಇದ್ದಲ್ಲಿ ಅವರಿಂದಲೂ ಅರ್ಜಿ ಪಡೆದು ಅವರಿಗೂ ಹಕ್ಕುಪತ್ರ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ತಾಪಂ ಅಧ್ಯಕ್ಷರ ನೇತೃತ್ವದಲ್ಲಿ ತಂಡ ರಚನೆ ಮಾಡಿಕೊಂಡು 35 ಗ್ರಾಮ ಪಂಚಾಯತ್‌ಗಳಲ್ಲಿ ಸಮರೋಪಾದಿಯಲ್ಲಿ ಅರ್ಜಿ ಪಡೆಯುವ ಕೆಲಸ ಮಾಡುವಂತೆ ಸೂಚನೆ ನೀಡಿದರು. ತಾಪಂ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕಲ್ಪಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಜಿಪಂ ಹಾಗೂ ತಾಪಂಗೆ ಇರುವಷ್ಟು ಅಧಿಕಾರ ಗ್ರಾಪಂಗೆ ಇಲ್ಲ. ಇದರಿಂದ ಅಧ್ಯಕ್ಷರು ತ್ವರಿತವಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ತಾಲೂಕಿನಲ್ಲಿ ಆಡಳಿತ ಯಂತ್ರ ಚುರುಕು ಗೊಳಿಸಬೇಕು. ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜನರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಆದೇಶಿಸಿದ ಸಚಿವರು, ಒಟ್ಟಾರೆ ಜನರು ನಮ್ಮ ಮೇಲೆ ಇರಿಸಿರುವ ನಿರೀಕ್ಷೆಗಳನ್ನು ಹುಸಿ ಮಾಡದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ, ಕಾರ್ಯ ನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ, ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿರಿದ್ದರು.







