ಬಡವರಿಗೂ ಮರಳು ಸಿಗುವಂತೆ ಮರಳು ನೀತಿ ಸಡಿಲಗೊಳಿಸಲು ಒತ್ತಾಯ
ಪುತ್ತೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

ಪುತ್ತೂರು, ಜು.1: ಮರಳು ನೀತಿಯ ಕಾರಣದಿಂದಾಗಿ ಬಡವರು ಮನೆ ನಿರ್ಮಿಸಲು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದ್ದು ಶ್ರೀಮಂತ ಬಡವ ಎಂಬ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿಯನ್ನು ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಪರಿಸ್ಥಿತಿ ಇದೇ ರೀತಿಯಾಗಿ ಮುಂದುವರಿದಲ್ಲಿ ಮರಳು ಸಾಗಾಟದ ಲಾರಿಗಳನ್ನೇ ಅಡ್ಡಗಟ್ಟಿ ಬಡವರು ಮರಳು ತೆಗೆದುಕೊಂಡು ಹೋಗುವ ಸಾಧ್ಯತೆಗಳಿವೆ. ಅದಕ್ಕೆ ಅವಕಾಶವಾಗದಂತೆ ತಾಲೂಕಿನಲ್ಲಿ ಮರಳು ಸ್ಥಳಗಳನ್ನು ಗುರುತಿಸಿ ಕನಿಷ್ಠ ದರದಲ್ಲಿ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ ಎಂದು ಕಂದಾಯ ಅಧಿಕಾರಿಗಳಿಗೆ ಶಾಸಕಿ ಶಕುಂತಳಾ ಶೆಟ್ಟಿ ಸೂಚನೆ ನೀಡಿದ್ದಾರೆ.
ಶಾಸಕಿ ಶಕುಂತಳಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಪಾಲನಾ ವರದಿ ಮಾಹಿತಿ ಪಡೆದ ಶಾಸಕರು, ಮನೆ ನಿರ್ಮಿಸಲು ಮರಳಿನ ಕೊರತೆ ಎದುರಾಗಿದೆ. ಲಾರಿಗಳಲ್ಲಿ ಇತರ ಜಿಲ್ಲೆಗಳಿಗೆ ಬೇಕಾಬಿಟ್ಟಿ ಮರಳು ಸಾಗಾಟವಾಗುತ್ತಿದೆ. ನದಿಯಿಂದ ನಾಲ್ಕು ಗೋಣಿ ಮರಳು ತೆಗೆದರೆ ವಶಕ್ಕೆ ತೆಗೆದುಕೊಳ್ಳುತ್ತೀರಿ. ಆದರೆ ಲಾರಿಯಲ್ಲಿ ಲೆಕ್ಕಕ್ಕಿಂತ ಹೆಚ್ಚು ಮರಳು ಸಾಗಿಸಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ನದಿಯ ಮರಳನ್ನು ನಮ್ಮ ಜನರು ಬಳಸಲು ಅವಕಾಶವಿಲ್ಲ. ಈ ಬಗ್ಗೆ ಯಾರನ್ನು ಕೇಳಬೇಕು ಎಂಬುದೂ ಜನರಿಗೆ ಗೊತ್ತಿಲ್ಲ. ಎಲ್ಲರೂ ನನಗೆ ದೂರವಾಣಿ ಕರೆ ಮಾಡಿ ದೂರು ನೀಡುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ ಅವರು ಮರಳು ನೀತಿಯಿಂದಾಗಿ ಬಡವರಿಗೆ ಹಾಗೂ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸುವವರಿಗೆ ಮರಳಿನ ಕೊರತೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ ಪುತ್ತೂರಿನ ನದಿ ಕಿನಾರೆಯಲ್ಲಿ 2 ಕಡೆಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಮರಳು ಇರುವ ಸ್ಥಳಗಳನ್ನು ಗುರುತಿಸಿ ಪರಿಶೀಲಿಸುವ ವಿಚಾರದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯ ಬಳಿಕ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ. ಇದಕ್ಕೆ ಭೂವಿಜ್ಞಾನ ಮತ್ತು ಗಣಿ ಇಲಾಖೆ, ಪಿಡಬ್ಲೂೃಡಿ ಇಲಾಖೆಯ ಒಪ್ಪಿಗೆ ಬೇಕಾಗಿದೆ ಎಂದರು.
ಕಡಬ ತಹಸೀಲ್ದಾರ್ ಬಿ. ಲಿಂಗಯ್ಯ, ಮರಳು ನೀತಿ ಸರಳೀಕರಣಕ್ಕಾಗಿ ಈಗಾಗಲೇ ಕಡಬ ವ್ಯಾಪ್ತಿಯ 7 ಕಡೆಗಳಲ್ಲಿ ಮರಳು ಇರುವ ಜಾಗ ಗುರುತಿಸಿ 7 ಮೈನರ್ ಬ್ಲಾಕ್ ಮಾಡಿಕೊಂಡು ಉಪವಿಭಾಗಾಧಿಕಾರಿಗಳಿಗೆ ಪಟ್ಟಿ ನೀಡಲಾಗಿದೆ ಎಂದು ಹೇಳಿದರು. ಮುಂದಿನ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿಯಾದರೂ ತಾಲೂಕಿನಲ್ಲಿ ಮರಳು ತೆಗೆಯಲು ಅವಕಾಶ ಪಡೆದುಕೊಂಡು ಬರಬೇಕು ಎಂದು ಶಾಸಕಿ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಉಪ್ಪಿನಂಗಡಿಯಲ್ಲಿ ನೆರೆ ಮುಂಜಾಗ್ರತಾ ಸಭೆ ನಡೆದಿಲ್ಲ. ಅವಘಡ ಸಂಭವಿಸಿದ ಬಳಿಕ ಸಭೆ ಮಾಡುವುದರ ಬದಲು ಮೊದಲು ಮಾಡುವುದಕ್ಕೆ ಯಾಕೆ ಅಧಿಕಾರಿಗಳಿಗೆ ಉತ್ಸಾಹವಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಪುಟ್ಟ ಶೆಟ್ಟಿ ಅವರು ನೆರೆ ಮುಂಜಾಗ್ರತಾ ಸಭೆಯನ್ನು ಕರೆಯಲಾಗಿತ್ತು. ಆದರೆ ಅದಕ್ಕೆ ಕೆಲ ಅಧಿಕಾರಿಗಳು ಬಾರದ ಕಾರಣ ಸ್ಥಳೀಯರ ಅಭಿಪ್ರಾಯದಂತೆ ರಮಝಾನ್ ಮುಗಿದ ಬಳಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ನೆರೆ ಮುಂಜಾಗ್ರತಾ ಸಭೆಯನ್ನು ಪುತ್ತೂರಿನಲ್ಲಿ ನಡೆಸುವ ಬದಲು ಉಪ್ಪಿನಂಗಡಿಯಲ್ಲಿಯೇ ನಡೆಸುವಂತೆ ಅಶ್ರಪ್ ಬಸ್ತಿಕಾರ್ ಒತ್ತಾಯಿಸಿದರು.
94ಸಿ ಹಕ್ಕುಪತ್ರದ ಬಗ್ಗೆ ಇನ್ನೂ ಸೂಕ್ತ ತೀರ್ಮಾನ ಆಗಿಲ್ಲ ಎಂದು ಆರೋಪಿಸಿದ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಜನರಿಗೆ ಇನ್ನೂ ಗೊಂದಲವಿದೆ ಎಂದರು. ಈ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟನೆ ಕೇಳಿದ ಶಾಸಕಿ, ಈ ಹಿಂದೆ ಮನೆ ಹಕ್ಕುಪತ್ರ ಪಡೆದುಕೊಂಡವರು ಇದೀಗ ಅದನ್ನು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಅಲ್ಲದೆ ಪರಂಬೋಕು, ಕುಮ್ಕಿ, ನೆಡುತೋಪುಗಳಲ್ಲಿ ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡುವ ಅವಶ್ಯಕತೆ ಇದೆ. ಈ ಬಗ್ಗೆ ಕಂದಾಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ನಾಮನಿರ್ದೇಶಿತ ಸದಸ್ಯರಾದ ವನಿತಾ, ಸೋಮನಾಥ, ಜಿ.ಪಂ. ಸದಸ್ಯರಾದ ಅನಿತಾ ಹೇಮನಾಥ್, ಪಿ.ಪಿ. ವರ್ಗೀಸ್, ಶಯನಾ ಜಯಾನಂದ, ಪ್ರಮೀಳಾ ಜನಾರ್ಧನ, ಸರ್ವೋತ್ತಮ ಗೌಡ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.







