ತುರ್ತು ಪರಿಸ್ಥಿತಿಯ ಲಾಭ ಪಡೆದವರು ಯಾರು ?
ಮಾನ್ಯರೆ,
ಪ್ರತಿ ವರ್ಷ ಜೂನ್ 25 ತಾರೀಖು ಬಂದ ಕೂಡಲೇ ಬಿಜೆಪಿಯವರಿಗೆ 1975-77ರ ಇಂದಿರಾ ಗಾಂಧಿಯ ಎಮರ್ಜನ್ಸಿ ನೆನಪಾಗುತ್ತದೆ. ‘‘ಅದರ ಬಗ್ಗೆ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಲಿ’’ ಎಂದು ಅವರು ಮೊನ್ನೆ ಮತ್ತೆ ಗುಡುಗಿದ್ದಾರೆ. ಆದರೆ ಅವರ ಪಕ್ಕದಲ್ಲಿಯೇ ತುರ್ತು ಪರಿಸ್ಥಿಯ ಕರಾಳ ಕೈಗಳಲ್ಲಿ ಒಂದಾದ ಮೇನಕಾ ಗಾಂಧಿ ಕುಳಿತಿರುತ್ತಾರೆ. ಜೊತೆಗೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಾಂಗ್ರೆಸ್‌ನಲ್ಲಿದ್ದು ಅದರ ಲಾಭ ಪಡೆದ ಬಹಳಷ್ಟು ಮರಿ ರಾಜಕಾರಣಿಗಳು ಜನರು ಈಗ ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳಾದ ಎನ್‌ಡಿಎಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇದೆಲ್ಲಾ ಬಿಜೆಪಿಯ ಹುಂಬ ಬಾಯಿಬಡಕರಿಗೆ ಕಾಣಿಸುವುದೇ ಇಲ್ಲ. ತುರ್ತುಪರಿಸ್ಥಿಯ ರೂವಾರಿ ಸಂಜಯ್ ಗಾಂಧಿಯ ಮಗ ವರುಣ್ ಗಾಂಧಿ ಈಗ ಬಿಜೆಪಿ ಪಕ್ಷದ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ಆಘೋಷಿತ ಅಭ್ಯರ್ಥಿಯಂತೆ! ಇವರಿಗಿಂತ ದೊಡ್ಡ ಆಷಾಢಭೂತಿಗಳು ಈ ಜಗತ್ತಿನಲ್ಲಿ ಬೇರೆ ಇದ್ದಾರೆಯೇ? 1975-77ರಲ್ಲಿ ಸೋನಿಯಾ ಅಥವಾ ರಾಜೀವ್ ಗಾಂಧಿ ಮತ್ತು ಮಕ್ಕಳು ಇಂದಿರಾರ ಜೊತೆಯಲ್ಲಿ ಇರಲೇ ಇಲ್ಲ. ಪೈಲೆಟ್ ಆಗಿದ್ದ ರಾಜೀವ ಗಾಂಧಿ ತನ್ನ ಹೆಂಡತಿ ಮಕ್ಕಳ ಜತೆ ಪ್ರತ್ಯೇಕವಾಗಿಯೇ ಇದ್ದು ರಾಜಕೀಯದಲ್ಲಿ ಸ್ವಲ್ಪವೂ ಹಸ್ತಕ್ಷೇಪ ಮಾಡಿರಲಿಲ್ಲ. ಆಗ ಇಂದಿರಾರ ಜೊತೆ ಇದ್ದು ಭಯಂಕರ ಅಧಿಕಾರ ಚಲಾಯಿಸಿದ್ದು ಸಂಜಯ್ ಮತ್ತು ಮೇನಕಾ ಗಾಂಧಿ ಮಾತ್ರ.
1975-77ರಲ್ಲಿ ಇದ್ದಿದ್ದು ಘೋಷಿತ ತುರ್ತುಪರಿಸ್ಥಿತಿ. ಆದರೆ ಈಗ ಮೋದಿಯಡಿ ಇರುವುದು ಅಘೋಷಿತ ತುರ್ತುಪರಿಸ್ಥಿತಿ. ಆಗಲೂ ಮೀಡಿಯಾದ ಕತ್ತು ಹಿಸುಕಲಾಗಿತ್ತು ಹಾಗೂ ಈಗಲೂ ಅದೇ ಆಗುತ್ತಿದೆ. ಮೋದಿ ವಿರುದ್ಧ ಮಾತನಾಡಿದ ಸುದ್ಧಿ ಸಂಪಾದಕನನ್ನು ಆಯಾ ಟಿವಿ ಹಾಗೂ ಪತ್ರಿಕೆಗಳು ಒಂದೇ ದಿನದಲ್ಲಿ ಮನೆಗೆ ಕಳುಹಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಆಗ ‘ಕಿಸ್ಸಾ ಕುರ್ಸಿಕಾ’ ಎಂಬ ಹಿಂದಿ ಚಲನ ಚಿತ್ರವನ್ನು ನಿಷೇಧಿಸಲಾಯಿತು ಹಾಗೂ ಈಗ ‘ಉಡ್ತಾ ಪಂಜಾಬ್’ ಮತ್ತು ಇತರ ಚಿತ್ರಗಳ ಕತ್ತು ಹಿಸುಕುವ ಪ್ರಯತ್ನ ಮಾಡಲಾಗುತ್ತಿದೆ. ಆಗ ಬಲಾತ್ಕಾರದಿಂದ ಕುಟುಂಬ ಯೋಜನೆ ಮಾಡಲಾಯಿತು ಆದರೆ ಯಾರನ್ನೂ ಜೀವಂತ ನೇಣು ಹಾಕಿ ಅಥವಾ ಬಡಿದು ಕೊಲ್ಲಲಿಲ್ಲ. ಆದರೆ ಈಗ ಗೋಮಾಂಸದ ಹೆಸರಲ್ಲಿ ಜನರನ್ನು ಬಡಿದು ಅಥವಾ ನೇಣು ಹಾಕಿ ಕೊಲ್ಲಲಾಗುತ್ತಿದೆ. ಇಂದಿರಾರ ತುರ್ತು ಪರಿಸ್ಥಿತಿಯಲ್ಲಿ ಆಹಾರ ಧಾನ್ಯಗಳ ಬೆಲೆ ಹತೋಟಿಗೆ ಬಂದು ಬಡವರ ಜೀವನ ಹಸನಾಗಿತ್ತು, ಆದರೆ ಈಗ ಮೋದಿಯವರ ಕಾಲದಲ್ಲಿ ಆಹಾರ ಧಾನ್ಯಗಳ ಬೆಲೆ ಮೂರು ಪಟ್ಟು ಏರಿ ಬಡವರ ಜೀವನ ದುರ್ಭರವಾಗಿದೆ.
ಸಾಮಾನ್ಯ ಜನರಿಗೆ ಬೇಕಾಗಿರುವುದು ಕೇವಲ ಎರಡು ಹೊತ್ತಿನ ಊಟ, ಸೂರು ಮತ್ತು ಬಟ್ಟೆ ಹಾಗೂ ಮಕ್ಕಳಿಗೆ ಶಿಕ್ಷಣ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಪಾವಿತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಇಡೀ ರಾಷ್ಟ್ರದ ಜನತೆ ಇಂದಿರಾ ಗಾಂಧಿಯ ತಪ್ಪನ್ನು ಕೇವಲ 30 ತಿಂಗಳಲ್ಲಿಯೇ ಕ್ಷಮಿಸಿ ಅವರನ್ನು ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿತು. ಜನರ ತೀರ್ಪು ಯಾವುದೇ ರಾಜಕೀಯ ಪಕ್ಷಗಳ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳಿಗಿಂತ ಹೆಚ್ಚು ಮುಖ್ಯವಾದುದು ತಾನೇ !.







