ಬಿಜೆಪಿ ಮುಖಂಡ ಖಡ್ಸೆಯ ಬಾಯಿ ಬಿಡಿಸುವುದು ಯಾರ ಕೆಲಸ?

ದಾವೂದ್ ಜೊತೆಗೆ ಖಡ್ಸೆ ಸಂಪರ್ಕ ಹೊಂದಿದ್ದು ನಿಜವೇ? ಆ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ವಜಾ ಮಾಡಿತೇ? ಹಾಗೊಂದು ವೇಳೆ ದಾವೂದ್ ಜೊತೆಗೆ ಖಡ್ಸೆ ಸಂಪರ್ಕ ಹೊಂದಿದ್ದರೆ, ಕೇವಲ ಸಂಪುಟದಿಂದ ವಜಾ ಮಾಡುವುದಷ್ಟೇ ಅವರಿಗೆ ಶಿಕ್ಷೆಯೇ? ಭಯೋತ್ಪಾದಕನೊಬ್ಬನೊಂದಿಗೆ ಸಂಬಂಧವನ್ನು ಹೊಂದಿರುವುದಕ್ಕಾಗಿ ಅವರನ್ನು ಸರಕಾರ ತಕ್ಷಣ ಬಂಧಿಸಬೇಡವೇ? ಅಷ್ಟೇ ಅಲ್ಲ, ಅವರನ್ನು ವಿಚಾರಣೆ ನಡೆಸಿ, ವಿಷಯವನ್ನು ಸಂಗ್ರಹಿಸಬೇಡವೇ? ಮುಂಬೈಯಲ್ಲಿ ನಡೆದ ಹಲವು ದುಷ್ಕೃತ್ಯಗಳ ಹಿಂದೆ ದಾವೂದ್ ಇಬ್ರಾಹೀಂ ಕೈವಾಡಗಳಿವೆ ಎಂದು ಸರಕಾರವೇ ಹೇಳುತ್ತಿರುವಾಗ, ಅವುಗಳ ಜೊತೆಗೆ ಖಡ್ಸೆಗಿರುವ ಸಂಬಂಧ ಹೊರ ಬರಬೇಡವೇ?
ಮಹಾರಾಷ್ಟ್ರದ ಕಡೆಯಿಂದ ಬಿಜೆಪಿ ಪದೇ ಪದೇ ಮುಜುಗರಕ್ಕೀಡಾಗುತ್ತಿದೆ. ಈಗಾಗಲೇ ಮಿತ್ರ ಪಕ್ಷ ಶಿವಸೇನೆ ಬೇರೆ ಬೇರೆ ರೀತಿಯಲ್ಲಿ ಬಿಜೆಪಿಯನ್ನು ಕೆಣಕುತ್ತಿದ್ದರೆ, ಇದೀಗ ಬಿಜೆಪಿಯ ಮುಖಂಡನೇ ಬಿಜೆಪಿಗೆ ಬಹಿರಂಗ ಬೆದರಿಕೆಯನ್ನು ಹಾಕಿದ್ದಾರೆ. ಮಹಾರಾಷ್ಟ್ರದ ಬಿಜೆಪಿಯ ನಾಯಕರೂ, ಮಾಜಿ ಸಚಿವರೂ ಆಗಿರುವ ‘ಏಕನಾಥ ಖಡ್ಸೆ’ ಅವರು ‘‘ನಾನು ಬಾಯಿ ಬಿಟ್ಟರೆ ಇಡೀ ದೇಶವೇ ನಡುಗಬಹುದು’’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಬೆದರಿಕೆ ಯಾರಿಗೆ? ವಿರೋಧ ಪಕ್ಷಗಳಿಗೋ, ಬಿಜೆಪಿಯ ಮುಖಂಡರಿಗೋ, ಆರೆಸ್ಸೆಸ್‌ಗೋ ಅಥವಾ ದೇಶದ ಜನರಿಗೋ ಎನ್ನುವುದನ್ನು ಅವರು ಈವರೆಗೆ ಸ್ಪಷ್ಟಪಡಿಸಿಲ್ಲ. ಇತ್ತೀಚೆಗಷ್ಟೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಕಾಂಕ್ಷಿಯಾಗಿದ್ದ ಖಡ್ಸೆ, ಇದೀಗ ಸಚಿವ ಸ್ಥಾನವನ್ನೂ ಕಳೆದುಕೊಂಡಿರುವುದು ಅವರ ಸಹನೆಯನ್ನು ಕೆಡಿಸಿರುವುದು ಸಹಜವೇ ಆಗಿದೆ. ಹಲವು ಪ್ರಮುಖ ಖಾತೆಗಳನ್ನು ತನ್ನೊಳಗೆ ಇಟ್ಟುಕೊಂಡಿದ್ದ ಖಡ್ಸೆಗೆ ಈಗ ತನ್ನದೇ ಪಕ್ಷ ಅಧಿಕಾರದಲ್ಲಿರುವಾಗ ಬರಿಗೈಯಲ್ಲಿ ಓಡಾಡುವುದು ಕಷ್ಟ. ಮಹಾರಾಷ್ಟ್ರದ ಹಿಂದುಳಿದವರ್ಗದ ಜನರ ಪ್ರತಿನಿಧಿಯಾಗಿಯೂ ಗುರುತಿಸಿಕೊಂಡಿರುವ ಖಡ್ಸೆ, ಈಗಾಗಲೇ ಬೇರೇ ಬೇರೆ ರೀತಿಯಲ್ಲಿ ಬಿಜೆಪಿ ನಾಯಕರಿಗೆ ತನ್ನ ಬೆದರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಇದೀಗ ಅಂತಿಮ ಅಸ್ತ್ರವಾಗಿ, ‘ದೇಶ ನಡುಗಿಸುವ ಸತ್ಯವನ್ನು ಬಹಿರಂಗ ಪಡಿಸುತ್ತೇನೆ’ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಬೆದರಿಕೆಗೆ ಆರೆಸ್ಸೆಸ್ ಮತ್ತು ಕೇಂದ್ರ ವರಿಷ್ಠರು ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
‘ದೇಶ ನಡುಗಿಸುವ ವಿಷಯ’ದಲ್ಲಿ ಖಡ್ಸೆ ಈಗಾಗಲೇ ಯಶಸ್ವಿಯಾಗಿದ್ದಾರೆ. ಬಿಜೆಪಿಯೊಳಗೂ ಅವರು ಒಂದು ಸಣ್ಣ ಕಂಪನವನ್ನು ಸೃಷ್ಟಿಸಿದ್ದಾರೆ. ಆ ಕಂಪನದ ಫಲವಾಗಿಯೇ ಖಡ್ಸೆ ಬಿಜೆಪಿಯಿಂದ ಅವಸರವಸರವಾಗಿ ಹೊರ ಬಿದ್ದರು. ಖಡ್ಸೆ ಅವರು ತಮ್ಮ ದೂರವಾಣಿಯ ಮೂಲಕ ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹೀಂ ಜೊತೆಗೆ ಸಂಪರ್ಕವನ್ನು ಹೊಂದಿದ್ದರು ಎಂಬ ಆರೋಪ ಮಾಧ್ಯಮಗಳಲ್ಲಿ ಹೊರಬೀಳುತ್ತಿದ್ದಂತೆಯೇ ದೇಶದ ಜನರು ಸಣ್ಣಗೆ ಕಂಪಿಸಿದ್ದರು. ದೇಶಪ್ರೇಮ, ಹಿಂದುತ್ವದ ಗುತ್ತಿಗೆಯನ್ನು ತೆಗೆದುಕೊಂಡಿರುವ, ಪಾಕಿಸ್ತಾನದ ವಿರುದ್ಧ ಸದಾ ಕೆಂಡ ಕಾರುವ ಬಿಜೆಪಿಯ ಮುಖಂಡ ಒಳಗಿಂದೊಳಗೆ ದಾವೂದ್ ಇಬ್ರಾಹೀಂ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವುದು ಸಣ್ಣ ವಿಷಯವಂತೂ ಅಲ್ಲ. ಖಡ್ಸೆ ಮಹಾರಾಷ್ಟ್ರದಲ್ಲಿ ಪ್ರಭಾವಿ ವ್ಯಕ್ತಿ. ಕಳೆದ ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ಖಡ್ಸೆ ಸಾಕಷ್ಟು ಶ್ರಮಿಸಿದ್ದರು. ಇಂತಹ ವ್ಯಕ್ತಿ ದಾವೂದ್ ಇಬ್ರಾಹೀಂ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವುದಾದರೆ ದಾವೂದ್ ಇಬ್ರಾಹೀಂನ ವಿರುದ್ಧ, ಭಯೋತ್ಪಾದನೆಯ ವಿರುದ್ಧ ಮಾತನಾಡುವ ಬಿಜೆಪಿಯ ಕುರಿತಂತೆಯೇ ನಾವು ಸಂಶಯವನ್ನು ವ್ಯಕ್ತಪಡಿಸಬೇಕಾಗುತ್ತದೆ.
ದಾವೂದ್ ಜೊತೆಗೆ ಖಡ್ಸೆಯ ದೂರವಾಣಿ ಸಂಪರ್ಕದ ಕುರಿತಂತೆ ಈವರೆಗೆ ಬಿಜೆಪಿ ಸ್ಪಷ್ಟೀಕರಣ ನೀಡಿಲ್ಲ. ಆರೋಪವನ್ನು ಸಾರಾಸಗಟಾಗಿ ನಿರಾಕರಿಸುವುದಕ್ಕೂ ಸಾಧ್ಯವಾಗಿಲ್ಲ. ಈ ಬಗ್ಗೆ ಒಂದು ಗಂಭೀರ ತನಿಖೆಗೆ ಆದೇಶವನ್ನೂ ಹೊರಡಿಸಿಲ್ಲ. ಈ ಆದೇಶ ಬಂದ ಬಳಿಕವಷ್ಟೇ ಖಡ್ಸೆಯ ಕುರಿತಂತೆ ಬಿಜೆಪಿ ಚುರುಕಾಯಿತು. ಬೇರೆ ಭ್ರಷ್ಟಾಚಾರದ ಕಾರಣಕ್ಕಾಗಿ ಖಡ್ಸೆಯನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು. ವ್ಯಾಪಂ ಹಗರಣದಿಂದ ಕುಖ್ಯಾತರಾಗಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಯ ವಿರುದ್ಧ, ಲಲಿತ್ ಮೋದಿ ಜೊತೆಗೆ ನಡೆಸಿದ ಭ್ರಷ್ಟಾಚಾರದ ಕಾರಣಕ್ಕೆ ಮಾಧ್ಯಮಗಳಲ್ಲಿ ಸುದ್ದಿಯಾದ ವಸುಂಧರಾರಾಜೇ ವಿರುದ್ಧ, ಜೇಟ್ಲಿ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವ ಬಿಜೆಪಿ, ಅವಸರವಸರವಾಗಿ ಖಡ್ಸೆ ವಿರುದ್ಧ ಯಾಕೆ ಕ್ರಮ ಕೈಗೊಂಡಿತು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ದಾವೂದ್ ಜೊತೆಗೆ ಖಡ್ಸೆ ಸಂಪರ್ಕ ಹೊಂದಿದ್ದು ನಿಜವೇ? ಆ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ವಜಾ ಮಾಡಿತೇ? ಹಾಗೊಂದು ವೇಳೆ ದಾವೂದ್ ಜೊತೆಗೆ ಖಡ್ಸೆ ಸಂಪರ್ಕ ಹೊಂದಿದ್ದರೆ, ಕೇವಲ ಸಂಪುಟದಿಂದ ವಜಾ ಮಾಡುವುದಷ್ಟೇ ಅವರಿಗೆ ಶಿಕ್ಷೆಯೇ? ಭಯೋತ್ಪಾದಕನೊಬ್ಬನೊಂದಿಗೆ ಸಂಬಂಧವನ್ನು ಹೊಂದಿರುವುದಕ್ಕಾಗಿ ಅವರನ್ನು ಸರಕಾರ ತಕ್ಷಣ ಬಂಧಿಸಬೇಡವೇ? ಅಷ್ಟೇ ಅಲ್ಲ, ಅವರನ್ನು ವಿಚಾರಣೆ ನಡೆಸಿ, ವಿಷಯವನ್ನು ಸಂಗ್ರಹಿಸಬೇಡವೇ? ಮುಂಬೈಯಲ್ಲಿ ನಡೆದ ಹಲವು ದುಷ್ಕೃತ್ಯಗಳ ಹಿಂದೆ ದಾವೂದ್ ಇಬ್ರಾಹೀಂ ಕೈವಾಡಗಳಿವೆ ಎಂದು ಸರಕಾರವೇ ಹೇಳುತ್ತಿರುವಾಗ, ಅವುಗಳ ಜೊತೆಗೆ ಖಡ್ಸೆಗಿರುವ ಸಂಬಂಧ ಹೊರ ಬರಬೇಡವೇ? ಇದೀಗ ‘‘ನಾನು ಬಾಯಿ ಬಿಟ್ಟರೆ ಇಡೀ ದೇಶವೇ ನಡುಗಬಹುದು’’ ಎಂದು ಖಡ್ಸೆ ಅವರೇ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಆದರೂ ಈ ಕುರಿತಂತೆ ಬಿಜೆಪಿ ಯಾವ ಪ್ರತಿಕ್ರಿಯೆಯನ್ನ್ನೂ ನೀಡಿಲ್ಲ.
ದೇಶವನ್ನೇ ನಡುಗಿಸುವಂತಹ ಸತ್ಯ ಅವರೊಳಗಿದೆ ಎಂದ ಮೇಲೆ, ಆ ಸತ್ಯವನ್ನು ಹೊರಗೆ ತೆಗೆಯುವುದು ದೇಶಪ್ರೇಮಿ ಪಕ್ಷವಾಗಿರುವ ಬಿಜೆಪಿಯ ಹೊಣೆಗಾರಿಕೆಯಲ್ಲವೇ? ದಾವೂದ್ ಇಬ್ರಾಹೀಂ ಜೊತೆಗೆ ಗುರುತಿಸಿಕೊಂಡಿರುವ ಆರೋಪವನ್ನು ಹೊತ್ತಿರುವ ಖಡ್ಸೆಯ ಹೊಟ್ಟೆಯೊಳಗೆ ದೇಶವನ್ನು ನಡುಗಿಸುವ ಸತ್ಯ ಇದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಹಾಗಾದರೆ ಕನಿಷ್ಟ ದೇಶದ ಮೇಲೆ ಪ್ರೀತಿಯಿರುವ ಖಡ್ಸೆಯಾದರೂ ಈ ಸತ್ಯವನ್ನು ಹೊರಗೆ ಹಾಕಬೇಕಲ್ಲವೇ? ಅಥವಾ ನಮ್ಮ ತನಿಖಾ ದಳಕ್ಕೆ ಆ ಸತ್ಯವನ್ನು ವರ್ಗಾಯಿಸಬೇಕಲ್ಲವೆವೇ? ದೇಶವನ್ನು ನಡುಗಿಸಬಲ್ಲ ಸತ್ಯವನ್ನು ಹೊಟ್ಟೆಯೊಳಗಿಟ್ಟುಕೊಂಡು ತಿರುಗಾಡುವುದು ದೇಶದ್ರೋಹವಲ್ಲವೇ? ದೇಶವನ್ನು ನಡುಗಿಸುವ ಸತ್ಯವನ್ನು ಅವರು ಸಚಿವ ಸ್ಥಾನಕ್ಕಾಗಿ ವ್ಯಾಪಾರಕ್ಕಿಟ್ಟಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದರೆ ಈ ಸತ್ಯವನ್ನು ಬಹಿರಂಗ ಪಡಿಸುತ್ತೇನೆ ಎಂದು ಬಿಜೆಪಿ ನಾಯಕರನ್ನು ಬೆದರಿಸುತ್ತಿದ್ದಾರೆ. ಬಿಜೆಪಿ ಖಂಡಿತವಾಗಿಯೂ ಅವರನ್ನು ಸಮಾಧಾನಿಸುವ ಕೆಲಸವನ್ನು ಮಾಡುತ್ತದೆ. ಅವರಿಗೆ ಬೇಕಾದುದನ್ನು ನೇರವಾಗಿ ಅಥವಾ ಪರೋಕ್ಷವಾಗಿ ನೀಡಿ ಬಾಯಿ ಮುಚ್ಚಿಸುತ್ತದೆ. ಅಂದರೆ ದೇಶವನ್ನು ನಡುಗಿಸುವ ಸತ್ಯ ಕೊನೆಗೂ ಹೊರ ಬರುವುದೇ ಇಲ್ಲ.
ಹಾಗಾದರೆ ಆ ಸತ್ಯವನ್ನು ಅವರ ಬಾಯಿಯಿಂದ ಹೊರಹಾಕಿಸುವ ಹೊಣೆಗಾರಿಕೆ ನಮ್ಮ ಪೊಲೀಸ್ ಇಲಾಖೆಗೆ, ಎನ್‌ಐಎಗೆ ಇಲ್ಲವೇ? ಎನ್ನುವುದು ದೇಶದ ಭದ್ರತೆಗೆ ಸಂಬಂಧ ಪಟ್ಟಂತೆ ಬಹಳ ಮುಖ್ಯ ಪ್ರಶ್ನೆ. ದೇಶದಲ್ಲಿ ನಡೆದ ಹಲವು ಉಗ್ರಗಾಮಿ ಕೃತ್ಯಗಳಲ್ಲಿ ಕೇಸರಿ ಪಡೆಗಳು ಈಗಾಗಲೇ ಗುರುತಿಸಿಕೊಂಡಿವೆ. ಆರೆಸ್ಸೆಸ್‌ನ ಪ್ರಮುಖನೊಬ್ಬನ ಹೆಸರೂ ತಳುಕು ಹಾಕಿಕೊಂಡಿವೆ. ಆರೆಸ್ಸೆಸ್‌ನ್ನು ಮಾತೃ ಸಂಘಟನೆ ಎಂದು ಬಿಜೆಪಿ ಗೌರವಿಸುತ್ತದೆ. ಹೀಗಿರುವಾಗ ದೇಶವನ್ನು ನಡುಗಿಸುವ ಸತ್ಯಗಳು ಬಿಜೆಪಿ ಮುಖಂಡನ ಜೊತೆಗಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಮುಂಬೈ ದಾಳಿಯೂ ಸೇರಿದಂತೆ ಹತ್ತು ಹಲವು ಸ್ಫೋಟಗಳು ದೇಶವನ್ನು ನಡುಗಿಸಿವೆ. ಇದರಲ್ಲಿ ಖಡ್ಸೆಯ ಹೊಟ್ಟೆಯೊಳಗಿರುವ ಬೆಂಕಿ ಯಾವುದು ಎನ್ನುವುದು ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗಲಷ್ಟೇ ಹೊರ ಬೀಳಬಹುದು.







