ಐಸಿಸಿ ಕ್ರಿಕೆಟ್ ಸಮಿತಿಯ ಮಾಧ್ಯಮ ಪ್ರತಿನಿಧಿ ಹುದ್ದೆಗೆ ರವಿ ಶಾಸ್ತ್ರಿ ರಾಜೀನಾಮೆ

ಹೊಸದಿಲ್ಲಿ, ಜು.1: ಐಸಿಸಿಯ ಪ್ರತಿಷ್ಠಿತ ಕ್ರಿಕೆಟ್ ಸಮಿತಿಯಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಮಾಜಿ ನಾಯಕ ಹಾಗೂ ಮಾಜಿ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರೇ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶಾಸ್ತ್ರಿಯವರನ್ನು ಕಡೆಗಣಿಸಿದ್ದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಕುಂಬ್ಳೆ ಅವರಿಗೆ ಕೋಚ್ ಹುದ್ದೆಗೆ ಆಯ್ಕೆ ಮಾಡಿತ್ತು.
ನಾನು ಈಗಾಗಲೇ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ನನಗೆ ವೈಯಕ್ತಿಕ ಬದ್ಧತೆಯಿರುವ ಕಾರಣ ಈ ನಿರ್ಧಾರಕ್ಕೆ ಬಂದಿರುವೆ. ಕಳೆದ ಆರು ವರ್ಷಗಳಿಂದ ನಾನು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಸುದ್ದಿಸಂಸ್ಥೆಗೆ ಶಾಸ್ತ್ರಿ ತಿಳಿಸಿದ್ದಾರೆ.
ವೀಕ್ಷಕವಿವರಣೆ, ಟಿವಿಗಳಲ್ಲಿ ಚರ್ಚಾಗೋಷ್ಠಿ ಹಾಗೂ ಅಂಕಣಗಾರರಾಗಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಶಾಸ್ತ್ರಿ ಪ್ರತಿಷ್ಠಿತ ಹುದ್ದೆ ತೊರೆಯಲು ಇರುವ ಅಧಿಕೃತ ಕಾರಣ. ಆದರೆ, ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯ ಸೌರವ ಗಂಗುಲಿ ಅವರೊಂದಿಗೆ ಬಹಿರಂಗವಾಗಿ ವಾಕ್ಸಮರ ನಡೆಸಿರುವುದು ಮಾಜಿ ಆಲ್‌ರೌಂಡರ್ ಶಾಸ್ತ್ರಿ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂಬ ವದಂತಿಯೂ ಹಬ್ಬಿದೆ.
ಸೌರವ್ ಅವರಂತೆಯೇ ರವಿ ಕೂಡ ಒಂದು ಹಂತದಲ್ಲಿ ಭಾವಜೀವಿ. ಅವರು ಈವರೆಗೆ ಐಸಿಸಿಯಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಬಿಸಿಸಿಐಯನ್ನು ಪ್ರತಿನಿಧಿಸುತ್ತಿದ್ದರು. ಬಹುಶಃ ಅವರಿಗೆ ಆ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ. ಕುಂಬ್ಳೆ ಐಸಿಸಿ ಕ್ರಿಕೆಟ್ ಮುಖಸ್ಥರಾಗಿ ಮುಂದುವರಿಯಲು ಬಯಸಿದ್ದಾರೆ. ಕುಂಬ್ಳೆ ಅವರೊಂದಿಗೆ ಸಭೆಯಲ್ಲಿ ಭಾಗವಹಿಸುವುದು ಶಾಸ್ತ್ರಿಗೆ ಇಷ್ಟವಾಗಿಲ್ಲ ಎಂದು ಕಾಣುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಾಸ್ತ್ರಿ ಭಾರತದ ಕೋಚ್ ಹುದ್ದೆಯ ಸಂದರ್ಶನಕ್ಕೆ ಟೆಲಿಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಕೋಚ್ ಹುದ್ದೆಯ ಆಯ್ಕೆ ಜವಾಬ್ದಾರಿ ಹೊತ್ತಿದ್ದ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರ ಪೈಕಿ ಓರ್ವರಾಗಿರುವ ಗಂಗುಲಿ ಸಂದರ್ಶನದ ವೇಳೆ ಗೈರಾಗಿದ್ದರು. ಗಂಗುಲಿ ಗೈರು ಹಾಜರಾಗಿದ್ದು, ಸಂದರ್ಶನದ ಪ್ರಕ್ರಿಯೆಗೆ, ಸಲಹಾ ಸಮಿತಿಯ ಸದಸ್ಯ ಸ್ಥಾನಕ್ಕೆ ಮಾಡಿರುವ ಅಗೌರವ ಎಂದು ಶಾಸ್ತ್ರಿ ಬಹಿರಂಗವಾಗಿ ಟೀಕಿಸಿದ್ದರು.
‘‘ಮುಂಬೈಕರ್ ರವಿ ಶಾಸ್ತ್ರಿ ಮೂರ್ಖರ ಜಗತ್ತಿನಲ್ಲಿದ್ದಾರೆ. ಒಂದು ವೇಳೆ ರವಿ ಭಾರತದ ಕ್ರಿಕೆಟ್ ಕೋಚ್ ಹುದ್ದೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ವಿದೇಶ ಪ್ರವಾಸಕ್ಕೆ ತೆರಳುವ ಬದಲು ಕೋಲ್ಕತಾದಲ್ಲಿ ಸಂದರ್ಶನಕ್ಕೆ ಖುದ್ದು ಹಾಜರಾಗಬೇಕಾಗಿತ್ತು’’ ಎಂದು ಗಂಗುಲಿ ಖಾರವಾಗಿ ಪ್ರತಿಕ್ರಿಯಿಸಿದ್ದರು.







