ಧೋನಿಯಿಂದ ತೆರವಾದ ಸ್ಥಾನ ತುಂಬುವುದು ಕಷ್ಟ: ಸಹಾ
ಬೆಂಗಳೂರು, ಜು.1: ಟೆಸ್ಟ್ ಕ್ರಿಕೆಟ್‌ನಿಂದ ಎಂಎಸ್ ಧೋನಿ ನಿವೃತ್ತಿಯಿಂದ ತೆರವಾಗಿರುವ ಸ್ಥಾನವನ್ನು ತುಂಬುವುದು ಅತ್ಯಂತ ಕಷ್ಟಕರ. ಅವರು ಭಾರತದ ಮ್ಯಾಚ್ ವಿನ್ನರ್ ಆಗಿದ್ದರು ಎಂದು ಭಾರತದ ಸ್ಪೆಷಲಿಸ್ಟ್ ಟೆಸ್ಟ್ ವಿಕೆಟ್‌ಕೀಪರ್ ವೃದ್ದಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಬಾ ನಿವೃತ್ತಿಯ ಬಳಿಕ ವಿಕೆಟ್‌ಕೀಪರ್ ಆಗಿ ಅವರ ಸ್ಥಾನವನ್ನು ತುಂಬುವುದು ಸುಲಭದ ಮಾತಲ್ಲ. ಏಕೆಂದರೆ ಅವರು ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅವರದು ಪ್ರಭಾವಿ ವ್ಯಕ್ತಿತ್ತ ಎಂದು ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತೀಯ ತಂಡದೊಂದಿಗೆ ಅಭ್ಯಾಸವನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಸಹಾ ಮಾತನಾಡಿದರು.
ಭಾರತ ತಂಡಕ್ಕೆ ಧೋನಿ ಅವರು ಏನು ಮಾಡಿದ್ದಾರೋ ಹಾಗೆಯೇ ಮಾಡುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ. ಧೋನಿ ಟೆಸ್ಟ್ ವಿಕೆಟ್‌ಕೀಪರ್ ಆಗಿದ್ದ ಅವಧಿಯಲ್ಲಿ ಬ್ಯಾಟಿಂಗ್ ಹಾಗೂ ಉತ್ತಮ ವಿಕೆಟ್‌ಕೀಪಿಂಗ್‌ನ ಮೂಲಕ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದರು ಎಂದು 31ರ ಹರೆಯದ ಕೋಲ್ಕತಾದ ಸಹಾ ಹೇಳಿದ್ದಾರೆ.
ಅವಕಾಶ ಲಭಿಸಿದಾಗಲೆಲ್ಲಾ ಧೋನಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಐಪಿಎಲ್ ಹಾಗು ಆಸ್ಟ್ರೇಲಿಯ ಪ್ರವಾಸದ ವೇಳೆ ಅವರೊಂದಿಗೆ ಚರ್ಚೆ ನಡೆಸುವ ಅವಕಾಶ ನನಗೆ ಲಭಿಸಿತ್ತು. ಬೌನ್ಸಿ ಪ್ಚಿಚ್‌ನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು. ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಅವರು ನನಗೆ ಸಲಹೆ ನೀಡಿದ್ದರು ಎಂದು ಸಹಾ ನುಡಿದರು.







