ಕುಸ್ತಿಪಟುಗಳಾದ ಸುಶೀಲ್-ಯೋಗೇಶ್ವರ್ ಗೆಳೆತನದಲ್ಲಿ ಬಿರುಕು

ಹೊಸದಿಲ್ಲಿ, ಜು.1: ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಭಾರತದ ಅಗ್ರ ಕುಸ್ತಿಪಟುಗಳು ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರುಗಳಾಗಿದ್ದ ಸುಶೀಲ್‌ಕುಮಾರ್ ಹಾಗೂ ಯೋಗೇಶ್ವರ್ ದತ್ತರ ನಡುವೆ ಇದೀಗ ಭಿನ್ನಾಭಿಪ್ರಾಯ ಮೂಡಿದೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ 74 ಕೆಜಿ ತೂಕ ವಿಭಾಗದಲ್ಲಿ ಭಾಗವಹಿಸುವ ಇಚ್ಛೆ ಹೊಂದಿದ್ದರು. ಈಗಾಗಲೇ ಈ ವಿಭಾಗದಲ್ಲಿ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್‌ರೊಂದಿಗೆ ಟ್ರಯಲ್ಸ್ ನಡೆಸುವಂತೆ ಸುಶೀಲ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ಸುಶೀಲ್ ಕಾನೂನು ಹೋರಾಟದಲ್ಲಿ ಸೋತಿದ್ದರು.
ಸುಶೀಲ್ ಒಲಿಂಪಿಕ್ಸ್ ಆಯ್ಕೆಗೆ ಟ್ರಯಲ್ಸ್ ನಡೆಸಬೇಕೆಂದು ಬೇಡಿಕೆ ಇಟ್ಟಿರುವುದಕ್ಕೆ ಯಾದವ್ ಬಹಿರಂಗವಾಗಿ ಆಕ್ಷೇಪ ಎತ್ತಿದ್ದರು. ಇದು ಈ ಇಬ್ಬರ ನಡುವಿನ ಸ್ನೇಹಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ. ದತ್ತ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.
‘‘ನಮ್ಮ ನಡುವಿನ ಗೆಳೆತನ ಈ ಹಿಂದಿನಂತಿಲ್ಲ ಎನ್ನುವುದು ಸತ್ಯ. ಇದಕ್ಕೆ ಕಾರಣ ಏನೆಂದು ನನಗೆ ಗೊತ್ತೇ ಇಲ್ಲ. ಟ್ರಯಲ್ಸ್ ವಿರುದ್ಧ ನನ್ನ ನಿಲುವಿಗೆ ಈಗಲೂ ಬದ್ಧನಾಗಿರುವೆ. ಒಲಿಂಪಿಕ್ಸ್ ತಂಡದ ಆಯ್ಕೆಗೆ ಮೊದಲು ಟ್ರಯಲ್ಸ್ ನಡೆಯಲು ಸಾಧ್ಯವಿಲ್ಲ. ನಾವು ಟ್ರಯಲ್ಸ್ ನಡೆಸದೇ ಮೂರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೇವೆ. ಇದೀಗ ಏಕೆ ನಿಯಮ ತಪ್ಪು ಎಂದು ಹೇಳಬೇಕು. ಎಲ್ಲರ ಮುಂದೆ ಸತ್ಯವಿದೆ. ನನಗೆ ಅಡಗಿಸಿಡಲು ಏನೂ ಇಲ್ಲ’’ ಎಂದು ಯೋಗೇಶ್ವರ್ ಹೇಳಿದ್ದಾರೆ.







