ಯುರೋ ಕಪ್ ಚಾಂಪಿಯನ್‌ಶಿಪ್:ಪೋರ್ಚುಗಲ್ ಸೆಮಿಫೈನಲ್‌ಗೆ
ಪೊಲೆಂಡ್ ಪೆನಾಲ್ಟಿ ಶೂಟೌಟ್‌ನಲ್ಲಿ ಔಟ್* ರೊನಾಲ್ಡೊ ಕನಸು ಜೀವಂತ
.jpg)
ಮಾರ್ಸೆಲ್ಲಿ, ಜು. 1: ಯುರೋ ಕಪ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಪೊಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳ ಅಂತರದಲ್ಲಿ ಮಣಿಸಿದ ಪೋರ್ಚುಗಲ್ ತಂಡ ಸೆಮಿಫೈನಲ್ ತಲುಪಿದೆ.
ಗುರುವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ 90 ನಿಮಿಷಗಳ ಆಟದಲ್ಲಿ ಉಭಯ ತಂಡಕ್ಕೂ ಗೆಲುವಿನ ಗಳಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ಡೊ ಅವರು ತಂಡವನ್ನು ಮುನ್ನಡೆಸಿದರು.
ಪೊಲೆಂಡ್ ತಂಡದ ರಾಬರ್ಟ್ ಲೆವಾನ್‌ಡೊವಿಸ್ಕಿ ಪಂದ್ಯದ ಆಟ ಆರಂಭಗೊಂಡ ಸೆಕೆಂಡ್‌ಗಳ ಒಳಗಾಗಿ ಗೋಲು ದಾಖಲಿಸುವ ಮೂಲಕ ಪೊಲಂಡ್ ತಂಡದ ಗೋಲು ಖಾತೆಯನ್ನು ತೆರೆದಿದ್ದರು.
33ನೆ ನಿಮಿಷದಲ್ಲಿ 18ರ ಆಟಗಾರ ರೆನಾಟೊ ಸಾಂಚೆಸ್ ಸೊಗಸಾದ ಗೋಲು ಬಾರಿಸಿ ಪೋರ್ಚುಗಲ್‌ಗೆ 1-1 ಸಮಬಲ ಸಾಧಿಸಲು ನೆರವಾದರು. ಬಳಿಕ ಉಭಯ ತಂಡಗಳಿಂದ ಗೋಲು ಬರಲಿಲ್ಲ.
ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್‌ನಲ್ಲಿ ರೊನಾಲ್ಡೊ ಅವರು ಪೋರ್ಚುಗಲ್ ತಂಡವನ್ನು ಮುನ್ನಡೆಸಿದರು. ಪೋರ್ಚುಗಲ್ ತಂಡದ ಐವರು ಆಟಗಾರರು ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸುವಲ್ಲಿ ಯಶಸ್ವಿಯಾದರು. ಆದರೆ ಪೊಲೆಂಡ್ ತಂಡದ ಬ್ಲಾಸ್ಝ್‌ಕೊವಿಸ್ಕಿ ಅವರಿಂದ ಗೋಲು ಗಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಪೊಲೆಂಡ್ ತಂಡ ಆಘಾತ ಅನುಭವಿಸಿತು.
ಪೋರ್ಚುಗಲ್ ತಂಡ ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ರೊನಾಲ್ಡೊ ಅವರಿಗೆ ಪ್ರಶಸ್ತಿ ಗೆಲ್ಲಲು ಕೊನೆಯ ಅವಕಾಶ ಇದಾಗಿದೆ. ಈ ಕಾರಣದಿಂದಾಗಿ ಅವರು ಪ್ರಶಸ್ತಿ ಗೆಲ್ಲುವ ಪ್ರಯತ್ನ ಮುಂದುವರಿಸಲಿದ್ದಾರೆ.
ಕ್ವಾರ್ಟರ್‌ಫೈನಲ್ ಹೈಲೈಟ್ಸ್
*ಪೋರ್ಚುಗಲ್ ತಂಡ ಯುರೋ ಕಪ್‌ನಲ್ಲಿ ಐದನೆ ಬಾರಿ ಸೆಮಿ ಫೈನಲ್‌ಗೆ ತಲುಪಿದೆ. ಈ ಹಿಂದೆ 1984, 2000, 2004 ಹಾಗೂ 2012ರ ಆವೃತ್ತಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತ್ತು.
*ಪೋರ್ಚುಗಲ್ ಪ್ರಮುಖ ಟೂರ್ನಿಯಲ್ಲಿ ಆಡಿದ್ದ ನಾಲ್ಕು ಪೆನಾಲ್ಟಿ ಶೂಟೌಟ್‌ಗಳ ಪೈಕಿ ಮೂರರಲ್ಲಿ ಜಯ ದಾಖಲಿಸಿದೆ.
*ರೆನಾಟೊ ಸ್ಯಾಂಚೆಸ್ ಯುರೋ ಕಪ್‌ನ ನಾಕೌಟ್ ಪಂದ್ಯದಲ್ಲಿ ಗೋಲು ಬಾರಿಸಿದ ಕಿರಿಯ ಆಟಗಾರ(18 ವರ್ಷ, 316 ದಿನ). ಯುರೋ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೆ ಕಿರಿಯ ಆಟಗಾರ. ವೊಲಾಂಥನ್ ಹಾಗೂ ರೂನಿ ಈ ಸಾಧಕರು.
* ಪೋರ್ಚುಗಲ್ ತಂಡದಲ್ಲಿ ಲೂಯಿಸ್ ಫಿಗೊ(5) ಅವರು ನಾನಿ(4) ನಂತರ ತಂಡದ ಗೆಲುವಿಗೆ ನೆರವಾದ ಎರಡನೆ ಆಟಗಾರ.
*ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಪೋರ್ಚುಗಲ್ ಬಾರಿಸಿದ ಗೋಲುಗಳ ಪೈಕಿ ನಾನಿ ಪ್ರಯತ್ನ ಶೇ.50ರಷ್ಟಿದೆ(3/6, ಎರಡು ಗೋಲು, ಒಂದು ನೆರವು).
*ಪೋಲೆಂಡ್ ಹಾಗೂ ಪೋರ್ಚುಗಲ್ ಯುರೋ 2016ರ ಟೂರ್ನಿಯಲ್ಲಿ ಎರಡನೆ ಬಾರಿ ಹೆಚ್ಚುವರಿ ಸಮಯಕ್ಕೆ ಪಂದ್ಯವನ್ನು ವಿಸ್ತರಿಸಿವೆ. 2000ರ ಯುರೋ ಕಪ್‌ನಲ್ಲಿ ಫ್ರಾನ್ಸ್ ಹಾಗೂ ಇಟಲಿ ಎರಡು ಬಾರಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದಿದ್ದವು.
*ಪೋರ್ಚುಗಲ್ ತಂಡ ಯುರೋ ಕಪ್‌ನಲ್ಲಿ ಹೆಚ್ಚು ಬಾರಿ ಹೆಚ್ಚುವರಿ ಸಮಯದಲ್ಲಿ ಪಂದ್ಯವನ್ನು ಆಡಿದ ಎರಡನೆ ತಂಡ. ಹಾಲೆಂಡ್ ತಂಡ(7) ಮೊದಲ ಸ್ಥಾನದಲ್ಲಿದೆ.
ಮುಂದೇನು?
ವೇಲ್ಸ್ ಹಾಗೂ ಬೆಲ್ಜಿಯಂ ತಂಡಗಳು ಶುಕ್ರವಾರ ತಡರಾತ್ರಿ ಲಿಲ್ಲಿಯಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಆಡುತ್ತವೆ. ಈ ಪಂದ್ಯವನ್ನು ಜಯಿಸುವ ತಂಡ ಜುಲೈ 6, ಬುಧವಾರ ಲಿಯೊನ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಪೋರ್ಚುಗಲ್ ತಂಡವನ್ನು ಎದುರಿಸಲಿದೆ.







