ಅರ್ನಬ್ ಗೆ ಪ್ರಧಾನಿ ಮೋದಿ ಹೇಳಿದ್ದೆಲ್ಲ ನಿಜವೇ ?
ಇಲ್ಲಿದೆ ಫ್ಯಾಕ್ಟ್ ಚೆಕ್

ಹೊಸದಿಲ್ಲಿ,ಜು.2: ಟೈಮ್ಸ್ ನೌ ಚಾನೆಲ್‌ನ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಧಾನಿ ನರೇಂದ್ರ ಮೋದಿಯ ಸಂದರ್ಶನ ನಡೆಸಿದ್ದು ಬಹಳಷ್ಟು ಸುದ್ದಿಯಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮರು ಪ್ರಶ್ನೆಹಾಕುವಲ್ಲಿ ನಿಷ್ಣಾತರಾಗಿರುವ ಅರ್ನಬ್ ಪ್ರಧಾನಿ ಹೇಳಿದ್ದಕ್ಕೆಲ್ಲಾ ಸಂದರ್ಶನದಲ್ಲಿ ತಲೆಯಲ್ಲಾಡಿಸಿದ್ದು ವಿಶೇಷ. ಹಾಗಿದ್ದಲ್ಲಿ ಪ್ರಧಾನಿ ಈ ಸಂದರ್ಶನದಲ್ಲಿ ಹೇಳಿದ್ದರಲ್ಲಿ ಎಷ್ಟು ಸತ್ಯಾಂಶವಿದೆಯೆಂಬುದರ ಬಗ್ಗೆ ನ್ಯೂಸ್ ಲಾಂಡ್ರಿ ಡಾಟ್ ಕಾಂ ನಡೆಸಿದ ಫ್ಯಾಕ್ಟ್ ಚೆಕ್ ಇಲ್ಲಿದೆ.
1. ಪ್ರಧಾನ ಮಂತ್ರಿ ಜನ್ ಧನ್‌ಯೋಜನೆ ಬಗ್ಗೆ:
ಬಡ ಜನರಿಗೆ ಬ್ಯಾಂಕ್ ಖಾತೆ ಹೊಂದುವಲ್ಲಿ ಸಹಾಯ ಮಾಡಿರುವುದು ಕಳೆದ 60 ವರ್ಷಗಳಲ್ಲಿಯೇ ಮೊದಲ ಬಾರಿ ಎಂಬ ಪ್ರಧಾನಿ ಹೇಳಿಕೆ ತಪ್ಪು. ಸ್ವಾಭಿಮಾನ್ ಹೆಸರಿನ ಇಂತಹುದೇ ಯೋಜನೆಯನ್ನು 2011 ರಲ್ಲಿ ಅಂದಿನ ವಿತ್ತ ಸಚಿವ ಪ್ರಣಬ್ ಮುಖರ್ಜಿ ಜಾರಿಗೊಳಿಸಿದ್ದರು. ಬ್ಯಾಂಕಿಂಗ್ ಸೌಲಭ್ಯವನ್ನು 20,000 ಹಳ್ಳಿಗಳಿಗೆ ಈ ಯೋಜನೆಯಂಗವಾಗಿ ಒದಗಿಸಲಾಗುವುದು ಎಂದು ಪ್ರಣಬ್ ಹೇಳಿದ್ದರೂ ಅಂತಿಮವಾಗಿ ಇದು ಕೇವಲ ಖಾತೆ ತೆರೆಯುವ ಯೋಜನೆಯಷ್ಟೇ ಆಯಿತು.
ಈ ಯೋಜನೆಯನ್ನು ರಿ ಬ್ರ್ಯಾಂಡ್ ಗೊಳಿಸಿ ಅದಕ್ಕೆ ಹೊಸ ಹುರುಪನ್ನು ಮೋದಿ ಸರಕಾರ ನೀಡಿದೆಯಾದರೂ ಬಡವರಿಗೆ ಬ್ಯಾಂಕು ಖಾತೆಗಳನ್ನು ತೆರೆಯಲು ಸಹಕರಿಸುವ ಮೊದಲ ಯೋಜನೆ ಇದೆನ್ನುವುದು ತಪ್ಪು.
2. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಗ್ಗೆ:
ಈ ಯೋಜನೆಯಂಗವಾಗಿ3.5 ಕೋಟಿ ಫಲಾನುಭವಿಗಳು ರೂ 1.22 ಲಕ್ಷ ಕೋಟಿ ರೂ. ಸಾಲ ಪಡೆದಿದ್ದಾರೆಂಬುದನ್ನು ಮೋದಿ ಹೇಳಿದ್ದಾರೆ. ಆದರೆ ಅಸಂಘಟಿತ ವಲಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಹಾಗೂ ಉದ್ಯೋಗ ಒದಗಿಸುವಲ್ಲಿ ಈ ಯೋಜನೆ ಎಷ್ಟು ಯಶಸ್ವಿಯಾಗಿದೆಯೆಂಬುದನ್ನು ತಿಳಿಯಲು ಸಾಧ್ಯವಿಲ್ಲವೆಂಬುದನ್ನೂ ಅವರು ತಿಳಿಸಿದ್ದಾರೆ.
3. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬಗ್ಗೆ :ಗರಿಷ್ಠ ಸಂಖ್ಯೆಯ ರೈತರನ್ನು ಒಳಗೊಳ್ಳುವ ಇಂತಹ ಯೋಜನೆಯನ್ನು ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಭಾರತದಲ್ಲಿ 1985ರಿಂದ ಬೆಳೆ ವಿಮಾ ಯೋಜನೆ ಜಾರಿಯಲ್ಲಿದೆ ಹಾಗೂ ಪ್ರಧಾನಿಯ ಹೇಳಿಕೆ ದಾರಿ ತಪ್ಪಿಸುವಂತದ್ದಾಗಿದೆ. ಮೇಲಾಗಿ ಈ ಯೋಜನೆಗೆ ಇನ್ನೂ ರೈತರನ್ನು ಸೇರಿಸಲಾಗುತ್ತಿರುವುದರಿಂದ ಗರಿಷ್ಠ ಸಂಖ್ಯೆಯ ರೈತರನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆಯೆನ್ನುವುದು ತಪ್ಪು.
4. ಮೂಲ ಸೌಕರ್ಯಾಭಿವೃದ್ಧಿಯ ಬಗ್ಗೆ:
ಈ ವರ್ಷ ದೇಶದಲ್ಲಿ ಸ್ವಾತಂತ್ರ್ಯಾನಂತರದ ಅತ್ಯಂತ ಗರಿಷ್ಠ ವಿದ್ಯುತ್ ಉತ್ಪಾದಿಸಲಾಗಿದೆಯೆಂದು ಪ್ರಧಾನಿ ಹೇಳಿದ್ದಾರೆ. ಅವರು ಹೇಳಿದ್ದು ಸರಿ. ಅಂತೆಯೇ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇಂತಹುದೇ ಹೇಳಿಕೆಯನ್ನು 2007, 2012 ಹಾಗೂ 2013 ರಲ್ಲಿ ಹಾಗೂ ವಾಜಪೇಯಿ 2002 ರಲ್ಲಿ ನೀಡಿದ್ದರು. ಸರಕಾರದ ವರದಿಯಂತೆ ಸ್ವಾತಂತ್ರ್ಯಾ ನಂತರ ಪ್ರತಿಯೊಂದು ಪಂಚವಾರ್ಷಿಕ ಯೋಜನೆಯ ಅವಧಿಯಲಿ ್ಲವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ.
ಈ ವರ್ಷ ಗರಿಷ್ಠ ಕಲ್ಲಿದ್ದಲು ಉತ್ಪಾದಿಸಲಾಗಿದೆಯೆಂದು ಪ್ರಧಾನಿ ಹೇಳಿದ್ದಾರೆ. ಆದರೆ ಸಂಬಂಧಿತ ಇಲಾಖೆಗಳ ವರದಿಯಂತೆ ಕಲ್ಲಿದ್ದಲು ಉತ್ಪಾದನೆ 2005 ರಿಂದ 2014 ರ ತನಕ ಪ್ರತಿ ವರ್ಷ ಹೆಚ್ಚಿದೆ.
ಈ ವರ್ಷ ಪ್ರತಿ ದಿನ ಗರಿಷ್ಠ ಉದ್ದದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರತಿ ದಿನ 20 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆಯೆಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಆದರೆ ಲಭ್ಯ ದಾಖಲೆಗಳ ಪ್ರಕಾರ ಈಗಿನ ಸರಕಾರ ಅಧಿಕಾರಕ್ಕೆ 2014 ರಲ್ಲಿ ಬಂದಾಗಿನಿಂದ ಗರಿಷ್ಠ 15.70 ಕಿ.ಮೀ. ಉದ್ದದ ರಸ್ತೆಗಳನ್ನು ಪ್ರತಿ ದಿನ ಎಪ್ರಿಲ್ 2015 ರಿಂದ ಜನವರಿ 2016 ರ ನಡುವೆ ನಿರ್ಮಿಸಲಾಗಿದೆ. 2012-13 ರಲ್ಲಿ ಯುಪಿಎ ಸರಕಾರ ಕೂಡ ಈ ನಿಟ್ಟಿನಲ್ಲಿ ಸಮಾನ ಅಭಿವೃದ್ಧಿ 2012-13 ರಲ್ಲಿ ದಾಖಲಿಸಿತ್ತು.
5. ಆಹಾರ ದರ ಏರಿಕೆ
ಆಹಾರ ಹಣದುಬ್ಬರ ಹಿಂದಿನ ಸರಕಾರದ ಅವಧಿಗೆ ಹೋಲಿಸಿದಾಗ ಈಗ ಕಡಿಮೆಯೆಂದು ಪ್ರಧಾನಿ ಹೇಳಿದ್ದು ನಿಜವೆಂದು ಹೇಳಬಹುದಾದರೂ ಈ ವರ್ಷದ ಮೇ ತಿಂಗಳ ಆಹಾರ ಬೆಲೆಯೇರಿಕೆ 7.55 ಶೇ. ಆಗಿತ್ತು ಹಾಗೂ ಇದು ಆಗಸ್ಟ್ 2014 ರಿಂದ ಅತ್ಯಂತ ಹೆಚ್ಚು ಏರಿಕೆಯಾಗಿದೆ.







