ಅಣ್ಣನ ಚಿತೆಗೆ ಹಾರಿದ ತಂಗಿ.. !

ದುಂಗಾರ್‌ಪುರ್, ಜು.2: ಇಪ್ಪಂತ್ತೆಂಟರ ಹರೆಯದ ವಿವಾಹಿತ ಮಹಿಳೆಯೊಬ್ಬಳು ಉರಿಯುತ್ತಿರುವ ಅಣ್ಣನ ಚಿತೆಗೆ ಹಾರಿ ಅತ್ಮಹತ್ಯೆಗೆ ಯತ್ನ ನಡೆಸಿದ ಘಟನೆ ರಾಜಸ್ಥಾನದ ದುಂಗಾರ್‌ಪುರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ದುರ್ಗಾ ಉರಿಯುತ್ತಿರುವ ಚಿತೆಗೆ ಹಾರಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರ್ಗಾ ಅವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದರೆ ಮನೋರೋಗದಿಂದ ಬಳಲುತ್ತಿರುವ ದುರ್ಗಾಳನ್ನು ಗಂಡ ತೊರೆದಿರುವ ಕಾರಣದಿಂದಾಗಿ ಆಕೆ ತವರು ಮನೆಯಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಳು.ತವರು ಮನೆಯಲ್ಲಿ ಆಕೆಗೆ ತಾಯಿ ಮತ್ತು ಮೂವರು ಸಹೋದರರು ಇದ್ದಾರೆ.
ದುರ್ಗಾ ಅವರ ಅಣ್ಣ ವೆಲಾ ರಾಮ್ ಮಾನತ್ (32) ಗುರುವಾರ ಸಂಜೆ ದುಂಗಾರ್‌ಪುರ್ ನಗರದಿಂದ ವಾಪಸಾಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಶುಕ್ರವಾರ ಬೆಳಗ್ಗೆ ಮೃತದೇಹದ ಗುರುತು ಪತ್ತೆ ಹಚ್ಚಲಾಗಿತ್ತು. ಅದರಂತೆ ಮರಣೋತ್ತರ ಪರೀಕ್ಷೆ ಬಳಿಕ ಆತನ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿತ್ತು.
ಶುಕ್ರವಾರ ಸಂಜೆ ಮನೆಯಿಂದ ಅರ್ಧ ಕಿ.ಮೀ ದೂರದ ಸ್ಥಳದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗಿತ್ತು ಎನ್ನಲಾಗಿದೆ. ಚಿತೆಯಲ್ಲಿರಿಸಲಾದ ಮೃತದೇಹ ಸುಟ್ಟು ಭಸ್ಮವಾಗುವ ಸ್ವಲ್ಪ ಮೊದಲು ಮನೆ ಮಂದಿ ಅಲ್ಲಿಂದ ತರೆಳಿದ್ದರು. ಆದರೆ ಚಿತೆ ಬಳಿಗೆ ಹೋದ ದುರ್ಗಾ ಚಿತೆಗೆ ಹಾರಿ ಆತ್ಮಹತ್ಯೆ ಮಾಡಕೊಳ್ಳುವ ಯತ್ನ ನಡೆಸಿದ್ದಾಳೆ. ಪಕ್ಕದ ಮನೆಯ ಬಾಲಕಿಯೊಬ್ಬಳು ದುರ್ಗಾ ಚಿತೆಗೆ ಹಾರುತ್ತಿರುವುದನ್ನು ಗಮನಿಸಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಚಿತೆಯಿಂದ ದುರ್ಗಾಳನ್ನು ಹೊರಕ್ಕೆ ಎಳೆದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.





