‘‘ಹಿರಿಯ ವಿದ್ವಾಂಸರ ಸಮಿತಿಯಲ್ಲಿ ಮಹಿಳೆಯರೂ ಇರಬಹುದು’’
ಸೌದಿ ಸಮಿತಿಯ ಅತ್ಯಂತ ಹಿರಿಯ ಸದಸ್ಯ ಶೇಖ್ ಅಬ್ದುಲ್ಲಾ

ಮಕ್ಕಾ, ಜು.2: ಸೌದಿಯ ಹಿರಿಯ ವಿದ್ವಾಂಸರ ಸಮಿತಿಯ ಸದಸ್ಯರಾಗುವ ಹಕ್ಕು ಮಹಿಳೆಯರಿಗೂ ಇದೆ ಎಂದು ಹೇಳಿರುವ ಸಮಿತಿಯ ಅತ್ಯಂತ ಹಿರಿಯ ಸದಸ್ಯ ಶೇಖ್ ಅಬ್ದುಲ್ಲಾ ಅಲ್-ಮನಿಯಾ, ಇದಕ್ಕೆ ಉದಾಹರಣೆಯಾಗಿ ಸಾರ್ವಜನಿಕ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರವಾದಿಯ ಪತ್ನಿಯರಾದ ಆಯಿಶಾ ಹಾಗೂ ಹಫ್ಸಾರನ್ನು ಉಲ್ಲೇಖಿಸಿದ್ದಾರೆ.
ಮಹಿಳೆಯರು ಕೂಡ ಸಮಿತಿಯ ಸಭೆಯಲ್ಲಿ ಭಾಗವಹಿಸಬಹುದು. ಆದರೆ ಅವರಿಗೆ ಪುರುಷರು ಕೂರುವ ಹಾಲ್‌ನ ಹತ್ತಿರದಲ್ಲಿಯೇ ಇರುವ ಇನ್ನೊಂದು ಹಾಲ್‌ನಲ್ಲಿ ಕೂರುವ ಏರ್ಪಾಟು ಮಾಡಬಹುದೆಂದೂ, ಅವರು ಅಲ್ಲಿಂದಲೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದೆಂದೂ ಹೇಳಿದ್ದಾರೆ.
ಭವಿಷ್ಯದಲ್ಲಿ ಮಹಿಳೆಯರು ಅರ್ಹತೆ ಹೊಂದಿದ್ದರೆ ಅವರು ಫತ್ವಾ ನೀಡುವುದರಿಂದ ಏನೂ ಸಮಸ್ಯೆಯಿಲ್ಲ ಎಂದೂ ಹೇಳಿದ ಅವರು, ಆಯಿಷಾ ಕೂಡ ಪ್ರವಾದಿಯ ಹಲವಾರು ಸಹವರ್ತಿಗಳಿಗೆ ಹಲವಾರು ವಿಚಾರಗಳ ಸಂಬಂಧ ಫತ್ವಾ ನೀಡುವ ಬಗ್ಗೆ ಸಲಹೆ ನೀಡುತ್ತಿದ್ದರು ಎಂದರು.
ಭವಿಷ್ಯದಲ್ಲಿ ಮಹಿಳಾ ನ್ಯಾಯಾಧೀಶರನ್ನು ಕಾಣುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಈ ಜವಾಬ್ದಾರಿಯನ್ನು ಪುರುಷರಿಗಷ್ಟೇ ಸೀಮಿತಗೊಳಿಸಬೇಕೆಂದರು. ಹಣಕಾಸಿನ ವಿಚಾರದಲ್ಲಿ ಹಾಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ವಿಚಾರದಲ್ಲಿ ಮಹಿಳೆಯೊಬ್ಬಳು ನೀಡುವ ತೀರ್ಪು ಸ್ವೀಕಾರಾರ್ಹವಲ್ಲವೆಂಬುದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.





