ಭಟ್ಕಳ: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಕೌಶಲ್ಯ ಅಭಿವೃದ್ಧಿಗೊಳ್ಳಬೇಕು - ಮಮತಾ ಭಟ್ಕಳ್

ಭಟ್ಕಳ,ಜು.2: ಕನ್ನಡ ಭಾಷಾ ಶಿಕ್ಷಕರು ತಮ್ಮಲ್ಲಿನ ಕೀಳರಮಿಯಿಂದ ಹೊರಬಂದು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಕೌಶಲ್ಯ ಅಭಿವೃದ್ಧಿಗೊಳಿಸುವುಲ್ಲಿ ಕೈಜೋಡಿಸಬೇಕು ಎಂದು ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ್ ಹೇಳಿದರು.
ಅವರು ಶನಿವಾರ ಶ್ರೀವಲ್ಲಿ ಪ್ರೌಢಶಾಲಾ ಸಂಭಾಂಗಣದಲ್ಲಿ ಜರಗಿದ ಭಟ್ಕಳ ತಾಲೂಕು ಕನ್ನಡ ಭಾಷಾ ಶಿಕ್ಷಕರ ಸಂಘ ಹಾಗೂ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಆಯೋಜಿಸಿದ್ದ ಕನ್ನಡ ಭಾಷಾ ಶಿಕ್ಷಕರ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ವಿಷಯದ ಆಸಕ್ತಿಯಿಲ್ಲದಿರುವುದು, ಹೇಗಾದರೂ ಮಾಡಿ ನಾವು ಉತ್ತೀರ್ಣರಾಗುತ್ತೇವೆ ಎಂಬ ಮನೋಭಾವನೆ ಇಂದು ವಿದ್ಯಾರ್ಥಿಗಳು ಕನ್ನಡ ಕಲಿಕೆಯಲ್ಲಿ ಹಿಂಬೀಳಲು ಕಾರಣವಾಗಿದೆ ಎಂದರು.
ಕನ್ನಡ ತೃತೀಯ ಭಾಷೆ ಕ್ಲಬ್ ನ ಅಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ ಭಟ್ಕಳದ ಪರಿಸರದಲ್ಲಿ ಕನ್ನಡ ಮಾಯವಾಗುತ್ತಿರುವುದರ ಕುರಿತು ಗಮನ ಸೆಳೆದು ಅಲ್ಪಸಂಖ್ಯಾತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಕ್ಲಷ್ಟವಾಗುತ್ತಿದೆ. ಅವರಿಗೆ ಅವರದೇ ಆದ ಭಾಷೆಯಲ್ಲಿ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಿದ್ದರೆ ಬಹುಶ ಪಾಠಗಳಲ್ಲಿನ ಸನ್ನಿವೇಶವಾದರೂ ಅರ್ಥವಾದೀತು ಎಂದರು. ಪ್ರಥಮ ಭಾಷಾ ಕನ್ನಡ ಕ್ಲಬ್ ಅಧ್ಯಕ್ಷ ಹಾಗೂ ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಕೆ.ಬಿ.ಮಡಿವಾಳ ಮಾತನಾಡಿ, ಕನ್ನಡ ಭಾಷೆಯ ಕಾರ್ಯಗಾರಗಳಿಂದಾಗಿ ಶಿಕ್ಷಕರು ತಮ್ಮಲ್ಲಿನ ತೊಡಕುಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾದೀತು. ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಿಕೊಳ್ಳುವಲ್ಲಿ ಇದು ಸಹಕಾರಿಯಾದೀತು ಎಂದರು.
ಶ್ರೀವಲ್ಲಿ ಪ್ರೌಢಶಾಲೆಯ ಶಿಕ್ಷಕ ಸಂಜಯ ಗುಡಿಗಾರ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.







