ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಆಡಳಿತ ಮಂಡಳಿ ಅಮಾನತಿಗೆ ಆಗ್ರಹ
ಮಂಗಳೂರು,ಜು.2: ಸುಳ್ಯದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ತಕ್ಷಣ ಮ್ಯಾನೇಜರ್ ಹಾಗೂ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿರಿಸಿ ತನಿಖೆ ನಡೆಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ ಅವರು, ಸಹಕಾರಿ ಸಂಘದಲ್ಲಿ ನೂಜಾಲು ಸುಬ್ರಹ್ಮಣ್ಯ ಭಟ್ ಎಂಬವರು ಕಾಳುಮೆಣಸು ಎಂದು ಭತ್ತವನ್ನು ಅಡವಿರಿಸಿ 10 ಲಕ್ಷ ರೂ. ಸಾಲ ಪಡೆದಿದ್ದರು. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಡವರಿಸಿದಾತ ಭತ್ತವನ್ನು ಕೊಂಡೊಯ್ದು ಸಾಲ ಮರುಪಾವತಿಸಿರುವುದಾಗಿ ತಿಳಿದು ಬಂದಿದೆ. ಈ ವ್ಯಕ್ತಿ ಸುಮಾರು ಒಂದೂವರೆ ವರ್ಷದ ಹಿಂದೆ ಬೇರೆ ವ್ಯಕ್ತಿಯೊಬ್ಬರ ಜಾಗಕ್ಕೆ ಸಂಬಂಧಿಸಿ ನಕಲಿ ಸಹಿ ಮಾಡಿ ಸಾಲ ಪಡೆದಿದ್ದರು. ಈ ಬಗ್ಗೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ.
ಮಾತ್ರವಲ್ಲದೆ, ನಕಲಿ ಚಿನ್ನವನ್ನು ಅಡವರಿಸಿ 4.80 ಲಕ್ಷ ರೂ. ಸಾಲ ಪಡೆದ ಪ್ರಕರಣವೂ ನಡೆದಿದೆ. ಈ ರೀತಿ ಸಹಕಾರಿ ಸಂಘದಲ್ಲಿ ಗ್ರಾಹಕನ ಸೋಗಿನಲ್ಲಿ ಜನಸಾಮಾನ್ಯರಿಗೆ ವಂಚನೆ ಮಾಡಿರುವ ಕುಕೃತ್ಯದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯೂ ಭಾಗಿಯಾಗಿರುವ ಕಾರಣ ಈ ಬಗ್ಗೆ ತನಿಖೆ ಆಗಬೇಕು. ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದ ನಿಯಂತ್ರಣದಲ್ಲಿರುವ ಈ ಸೊಸೈಟಿಯು ಸ್ಥಳೀಯ ಶಾಸಕರ ಗ್ರಾಮದಲ್ಲೇ ಇರುವುದರಿಂದ ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಬಿ.ಎಸ್. ಗಂಗಾಧರ, ಅರೆಭಾಷೆ ಅಕಾಡೆಮಿಯ ಸದಸ್ಯ ಸದಾನಂದ ಮಾವಂಜೆ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.







