ನರೇಶ್ ಶೆಣೈಗೆ ಜು.11ರವರೆಗೆ ನ್ಯಾಯಾಂಗ ಬಂಧನ

ಮಂಗಳೂರು, ಜು.2: ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈಗೆ ಜು.11 ರವರೆಗೆ ನ್ಯಾಯಂಗ ಬಂಧನವನ್ನು ವಿಧಿಸಿ ಮೂರನೆ ಪ್ರಥಮ ದರ್ಜೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ನರೇಶ್ ಶೆಣೈಯನ್ನು ಮೊದಲಿಗೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಅದರ ನಂತರ ಮತ್ತೆ ತನಿಖೆಗಾಗಿ ಮತ್ತೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆರು ದಿನಗಳ ಪೊಲೀಸ್ ಕಸ್ಟಡಿಯ ಬಳಿಕ ಇಂದು ಸಂಜೆ ನರೇಶ್ ಶೆಣೈಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಜು.11 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ವೇಳೆ ನರೇಶ್ ಶೆಣೈಗೆ ನ್ಯಾಯಾಂಗ ಬಂಧನದ ಸಂದರ್ಭದಲ್ಲಿ ಅನಾರೋಗ್ಯ ಕಾಣಿಸಿಕೊಂಡರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕೆಂದು ನರೇಶ್ ಶೆಣೈ ವಕೀಲರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ನರೇಶ್ ಶೆಣೈಯನ್ನು ಅನಾರೋಗ್ಯ ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಿಸುವಂತೆ ಆದೇಶವನ್ನು ನೀಡಲು ನಿರಾಕರಿಸಿತು.





