ಸುಳ್ಯ: ಫೋಟೊಗ್ರಾಫರ್ಸ್ ಅಸೋಸಿಯೇಶನ್‌ನಿಂದ ಧರಣಿ
ಸ್ಟುಡಿಯೊ ಬಂದ್: ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ

ಸುಳ್ಯ, ಜು.2: ರಾಜ್ಯ ಛಾಯಾಗ್ರಾಹಕರ ಸಂಘದ ಕರೆಯಂತೆ ಸುಳ್ಯ ವಲಯ ಛಾಯ ಚಿತ್ರಗ್ರಾಹಕರ ಸಂಘದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಧರಣಿ ನಡೆಯಿತು.
ಸುಳ್ಯ ಶಾಸ್ತ್ರಿ ವೃತ್ತದ ಬಳಿಯಿಂದ ಮೆರವಣಿಗೆಯನ್ನು ಆರಂಭಿಸಿದ ಛಾಯಾಗಾರರು ಸುಳ್ಯದ ಮುಖ್ಯ ಪೇಟೆಗಾಗಿ ಸಾಗಿ ಗಾಂಧಿನಗರಕ್ಕೆ ಹೋಗಿ ರಥಬೀದಿಯಾಗಿ ಸುಳ್ಯ ತಾಲೂಕು ಕಚೇರಿ ಎದುರು ಸಮಾವೇಶಗೊಂಡರು.
ಸಂಘದ ಅಧ್ಯಕ್ಷ ಕರುಣಾಕರ ಎಣ್ಣೆಮಜಲು ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾನ್ಯ ನಾಗರಿಕರಿಗಾಗಿ ಇರುವ ಎಲ್ಲಾ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಛಾಯಾ ವೃತ್ತಿ ಬಾಂಧವರಿಗೂ ಕಲ್ಪಿಸಬೇಕು. ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಎಲ್ಲೆಲ್ಲಿ ಛಾಯಾಗ್ರಹಣದ ಸೇವೆಯಿದೆಯೋ ಅಲ್ಲೆಲ್ಲಾ ವೃತ್ತಿಪರ ಛಾಯಾಗ್ರಾಹಕರಿಗೆ ಅವಕಾಶ ಕೊಡಬೇಕು, ಸರಕಾರದಿಂದ ಒಂದು ಕಲ್ಯಾಣ ನಿಧಿಯನ್ನು ಸ್ಥಾಪಿಸಿ, ಸಂತ್ರಸ್ತ ಛಾಯಾ ಚಿತ್ರೋದ್ಯಮಿಗಳಿಗೆ ನೆರವು ನೀಡಿ ಸಂರಕ್ಷಿಸಬೇಕು ಎಂದರು.
ಉಪತಹಶೀಲ್ದಾರ್ ರಾಮಣ್ಣ ನಾಯ್ಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ಅನುರಾಜ್ ಪಂಜ, ಕೋಶಾಧಿಕಾರಿ ದಿವಾಕರ ಮುಂಡಾಜೆ, ಉಪಾಧ್ಯಕ್ಷ ವೇಣು ಬಾಳಿಲ, ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಸುಳ್ಯ, ಬಾಲಕೃಷ್ಣ ಗುತ್ತಿಗಾರು, ಪರಮ್ ಸುಳ್ಯ, ಲಕ್ಷ್ಮೀನಾರಾಯಣ ಬೆಳ್ಳಾರೆ, ಬಿ.ಎನ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.





