ಸೌದಿ ಅರೇಬಿಯಾ :ರಮಝಾನ್‌ನ ಕೊನೆಯ ಶುಕ್ರವಾರದಲ್ಲಿ ಎರಡು ಹರಮ್‌ಗಳಲ್ಲಿ ಭಾರೀ ಜನಸಂದಣಿ

ಜಿದ್ದಾ, ಜುಲೈ 2: ನಿನ್ನೆ ಸೌದಿ ಅರೇಬಿಯಾದಲ್ಲಿ ರಮಝಾನ್‌ನ ಕೊನೆಯ ಶುಕ್ರವಾರ ಹಾಗೂ ರಮಝಾನ್ ಇಪ್ಪತ್ತೇಳರ ರಾತ್ರಿ ಜೊತೆಯಾಗಿ ಬಂದುದರಿಂದ ಎರಡು ಹರಮ್‌ಗಳಿಗೆ(ಮಸ್ಚಿದುಲ್ ಹರಾಮ್ ಮತ್ತು ಮಸ್ಚಿದುನ್ನಬವಿಯಿರುವ ಪ್ರದೇಶ) ಹರಿದು ಬಂದ ಜನಸಾಗರವನ್ನು ನಿಯಂತ್ರಿಸಲು ಅಧಿಕಾರಿಗಳು ಭಾರೀ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿದ್ದರು. ಮಕ್ಕಾ ಗವರ್ನರ್ ಅಮೀರ್ ಖಾಲಿದ್ ಅಲ್‌ಫೈಸಲ್‌ರ ವಿಶೇಷ ಸೂಚನೆ ಪ್ರಕಾರ ಹರಮ್ ಕಾರ್ಯಾಲಯದಲ್ಲಿರುವ ವಿವಿಧ ಇಲಾಖೆಗಳು ಅಗತ್ಯ ಕ್ರಮಗಳನ್ನು ಮೊದಲೇ ಪೂರ್ತಿಗೊಳಿಸಿದ್ದವು.ಎಲ್ಲಾ ಇಲಾಖೆಗಳು ಜನರನ್ನು ಲೆಕ್ಕಮಾಡಿ ಹೆಚ್ಚಿನ ವ್ಯವಸ್ಥೆಯಿರುವ ಕಾರ್ಯಯೋಜನೆ ಸಿದ್ಧಪಡಿಸಿತ್ತು. ಸಿವಿಲ್ ಡಿಫೆನ್ಸ್ ಸುರಕ್ಷಾ ವಿಭಾಗ ಜನ ದಟ್ಟಣೆ ಇರುವುದನ್ನು ಎಸ್ಸೆಮ್ಮೆಸ್ ಮೂಲಕ ಜನರಿಗೆ ಆಗಾಗ ತಿಳಿಸಿ ಬೇರೆ ಮಸೀದಿಗಳಿಗೆ ಹೋಗಲು ಮತ್ತು ಉಮ್ರಾವನ್ನು ಮುಂದೂಡಲು ವಿನಂತಿಸಿಕೊಳ್ಳುತ್ತಿತ್ತು. ಹರಮ್ ಮತ್ತು ಪರಿಸರದಲ್ಲಿಸಿವಿಲ್ ಡಿಫೆನ್ಸ್‌ಕೇಂದ್ರಗಳಸಂಖ್ಯೆಯನ್ನು ಅರುವತ್ತಕ್ಕೇರಿಸಲಾಗಿತ್ತು. ಜನರ ಓಡಾಟವನ್ನು ಸುಸೂತ್ರಗೊಳಿಸಲು ಹಜ್- ಉಮ್ರಾ ಸೇನೆ, ಹರಮ್ ಸೇನೆ. ಪೊಲೀಸರ ಅಧೀನದಲ್ಲಿ ಹರಮ್‌ನ ಒಳಗೆ ಮತ್ತು ಹೊರಗೆ ಹೆಚ್ಚಿನ ಜನರನ್ನು ಸುರಕ್ಷಾ ಕಾರ್ಯಕ್ಕಾಗಿ ನೇಮಕಗೊಳಿಸಲಾಗಿತ್ತು.
ಜನಸಂದಣಿ ಕಡಿಮೆಗೊಳಿಸಲಿಕ್ಕಾಗಿ ಖಾಸಗಿವಾಹನಗಳನ್ನು ಪೂರ್ವನಿರ್ಧರಿತ ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಲಾಗುತ್ತಿತ್ತು. ಚೈನ್ ಬಸ್ ಸರ್ವೀಸ್‌ಗಳ ಪಾರ್ಕಿಂಗ್ ಕೇಂದ್ರಗಳಿಂದ ಹರಮ್‌ನೆಡೆಗೆ ಹೋಗುವ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಯಾತ್ರಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿತ್ತು. ಹೆಚ್ಚಿನ ಸರಕಾರಿ ಕಚೇರಿಗಳಿಗೆ ಈದುಲ್‌ಫಿತ್ರ್ ರಜೆಯಿದ್ದುದರಿಂದ ಮಕ್ಕಾದೊಳಗಿನ ಯಾತ್ರಿಕರ ಸಂಖ್ಯೆ ಅಧಿಕವಾಗಿತ್ತು. ಹರಮ್‌ನಲ್ಲಿ ಕೊನೆಯ ಹತ್ತು ದಿವಸಗಳಲ್ಲಿ ಉಳಿದುಕೊಳ್ಳಲಿಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಹಲವಾರು ಮಂದಿ ಕುಟುಂಬ ಸಮೇತ ಬಂದಿದ್ದರು. ಮದೀನಾದ ಮಸ್ಚಿದುನ್ನಬವಿಯಲ್ಲಿ ಕೂಡ ಸಂದರ್ಶಕರು ಮತ್ತು ಸ್ವದೇಶಿಗಳು ಸೇರಿ ಐದು ಲಕ್ಷಕ್ಕಿಂತ ಅಧಿಕ ಮಂದಿ ಜುಮಾ ನಮಾಝ್ ನಿರ್ವಹಿಸಿದ್ದಾರೆಂದು ಲೆಕ್ಕಹಾಕಲಾಗಿದೆ. ಜನ ಸಂದಣಿ ಕಡಿಮೆಗೊಳಿಸಲಿಕ್ಕಾಗಿ ಮಸೀದಿಯ ನೂರರಷ್ಟು ಬಾಗಿಲುಗಳನ್ನು ತೆರೆಯಲಾಗಿತ್ತು. ಟ್ರಾಫಿಕ್‌ಮತ್ತು ಭದ್ರತಾ ವ್ಯವಸ್ಥೆಗಾಗಿ 18000 ಮಂದಿಯನ್ನು ನೇಮಿಸಲಾಗಿತ್ತು.







