ಮಣಿಕ್ಕರ: ಆರೋಗ್ಯ ಮಾಹಿತಿ,ಕರಪತ್ರ ವಿತರಣೆ

ಪುತ್ತೂರು, ಜು.2: ಸೊಳ್ಳೆಗಳ ನಿರ್ಮೂಲನೆ ಹಾಗೂ ಪರಿಸರ ಸ್ವಚ್ಛತೆಯೊಂದೇ ರೋಗ ಹರಡದಂತೆ ತಡೆಗಟ್ಟಬಹುದಾದ ಮಾರ್ಗೋಪಾಯವಾಗಿದೆ. ಯಾವುದೇ ರೋಗ ಬಂದರೆ ಅಸಡ್ಡೆ ಮಾಡದೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋಧಾ ಹೇಳಿದರು.
ಅವರು ಶುಕ್ರವಾರ ಪಾಲ್ತಾಡು ಶ್ರೀವಿಷ್ಣುಮಿತ್ರವೃಂದ ಹಾಗೂ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ‘ಸ್ವಸ್ಥ ಸಮಾಜಕ್ಕಾಗಿ ನಮ್ಮ ನಡೆ’ ಕಾರ್ಯಕ್ರಮದ ಅಂಗವಾಗಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಸಂಸ್ಥೆಯ ಆರೋಗ್ಯ ಹಾಗೂ ಇಕೋಕ್ಲಬ್‌ನ ಸಹಯೋಗದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುತ್ತಿರುವ ರೋಗಗಳಾದ ಮಲೇರಿಯಾ ,ಡೆಂಗ್, ಫೈಲೇರಿಯಾ, ಚಿಕುನ್ ಗುನ್ಯಾ ಬರದಂತೆ ತಡೆಯುವ ಮಾರ್ಗೋಪಾಯಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಶಾಲಾ ಪ್ರಭಾರ ಮುಖ್ಯಗುರು ಧರ್ಮಪಾಲ ಕೆ.ಕೆ. ಮಾತನಾಡಿ, ಜನಜಾಗೃತಿಯಿಂದ ಮಾತ್ರ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ. ಜನತೆ ಜಾಗೃತರಾಗದಿದ್ದಲ್ಲಿ ಯಾವುದೇ ಕೆಲಸ ಮಾಡಿದರೂ ಅದು ಯಶಸ್ವಿಯಾಗಿ ನಡೆಯಲು ಅಸಾಧ್ಯ. ಆರೋಗ್ಯದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚು ನಡೆಯಬೇಕು ಎಂದರು.
ವೇದಿಕೆಯಲ್ಲಿ ಪ್ರೌಢಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಗಫೂರ್ ಸಾಹೇಬ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಚೈತ್ರಾ, ಆಶಾ ಕಾರ್ಯಕರ್ತೆ ಬೇಬಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಮಿತ್ರವೃಂದದ ಪ್ರವೀಣ್ ಕುಮಾರ್ ಸ್ವಾಗತಿಸಿ, ಮನೀಶ್ ಕುಮಾರ್ ವಂದಿಸಿದರು.







