ಪುತ್ತೂರು: ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಜು.4ರಂದು ಧರಣಿ
ಪುತ್ತೂರು, ಜು.2: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕಟ್ಟತ್ತಾರು ಬಾರೆಕೊಚ್ಚಿ ಮಠ ಪರಿಶಿಷ್ಟ ಜಾತಿ ಕಾಲನಿಗೆ ರಸ್ತೆ ನಿರ್ಮಿಸಿ ಕೊಡಬೇಕೆಂಬ ನಾಗರಿಕರ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಜು.4ರಂದು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಗಿರಿಧರ್ ನಾಯ್ಕಾ ತಿಳಿಸಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕಟ್ಟತ್ತಾರು ಬಾರೆಕೊಚ್ಚಿ ಮಠ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಜಾತಿಯ ಹಲವಾರು ಮನೆಗಳಿದ್ದರೂ ಅಲ್ಲಿಗೆ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲ. ಅಲ್ಲಿನ ಮಕ್ಕಳು,ವೃದ್ದರು, ಅಂಗವಿಕಲರು ಅನಾರೋಗ್ಯಕ್ಕೊಳಗಾದರೆ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈ ಕಾಲನಿಗೆ ಅತೀ ಅಗತ್ಯ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಕಳೆದ ಫೆ.1ರಂದು ಅಲ್ಲಿನ ನಾಗರಿಕರು ಈಶ್ವರಮಂಗಲದಿಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದರು. ಆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಲೆದಿರುವ ನಿರ್ಲಕ್ಷ ಧೋರಣೆಯನ್ನು ವಿರೋಧಿಸಿ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಜು.4ರಂದು ಬೆಳಗ್ಗೆ 11 ಗಂಟೆಯಿಂದ ಉಗ್ರ ಪ್ರತಿಭಟನೆ ಆರಂಭಿಸಲಾಗುವುದು. ನ್ಯಾಯ ಸಿಗುವ ತನಕ ಪ್ರತಿಭಟನೆ ನಡೆಯುವುದು ಎಂದು ಅವರು ತಿಳಿಸಿದ್ದಾರೆ.







