ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟುಗಳ ಹಂಚಿಕೆ

ಮಂಗಳೂರು,ಜು.2: 2016-17ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿ ಕೋರಿ ಅರ್ಜಿ ಸಲ್ಲಿಸಿ ಮೊದಲ ಮತ್ತು ಎರಡನೆ ಸುತ್ತಿನ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾಗಿದ್ದು, ವಾಸಸ್ಥಳದಿಂದ ಶಾಲೆಗೆ ಇರುವ ಅಂತರದ ಕಾರಣ ಅಥವಾ ವಾರ್ಡ್ ಹೊರಭಾಗದಲ್ಲಿರುವ ಕಾರಣ ಅಥವಾ ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಅರ್ಜಿ ಸಲ್ಲಿಸಿದ್ದ ಕಾರಣ ತಿರಸ್ಕರಿಸಲ್ಪಟ್ಟಲ್ಲಿ ದೂರದ ಅಂತರವನ್ನು ಸಡಿಲಿಸಿ, ಸೀಟು ಹಂಚಿಕೆಯಾದ ಶಾಲೆಗಳಲ್ಲಿ ಸೀಟು ಖಾಲಿ ಇದ್ದಲ್ಲಿ ಭರ್ತಿ ಮಾಡಲಾಗುತ್ತದೆ.
ಒಂದು ವೇಳೆ ಸೀಟು ಹಂಚಿಕೆಯಾದ ಶಾಲೆಗಳಲ್ಲಿ 2ನೆ ಸುತ್ತಿನ ಲಾಟರಿ ಪ್ರಕ್ರಿಯೆಯ ನಂತರ ಆರ್‌ಟಿಇ ಅಡಿ ಮೀಸಲಿಟ್ಟಿದ್ದ ಎಲ್ಲಾ ಸೀಟುಗಳು ಭರ್ತಿಯಾಗಿದ್ದಲ್ಲಿ ಅಂತಹ ಮಕ್ಕಳು ಅರ್ಜಿಯಲ್ಲಿ ಬೇರೆ ಶಾಲೆಗಳಿಗೆ ನೀಡುವ ಆದ್ಯತೆ ಪರಿಗಣಿಸಿ ಅಂತಹ ಶಾಲೆಗಳಲ್ಲಿ ಸೀಟುಗಳು ಬಾಕಿ ಇದ್ದಲ್ಲಿ ಮೊದಲ ಆದ್ಯತೆ ಮೇಲೆ ಸೀಟು ಹಂಚಿಕೆ ಮಾಡಲಾಗುವುದು. ಹಾಗೂ ಅರ್ಹತಾ ಪಟ್ಟಿಯಲ್ಲಿ ಮಗುವಿನ ಹೆಸರು ಸೇರಿದ್ದು ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾಗದ ಬಡತನದ ಕುಟುಂಬದ ಅರ್ಹ ಮಕ್ಕಳಿಗೆ ಆರ್‌ಟಿಇ ಅಡಿ ಆದ್ಯತೆ ನೀಡಿ ಖಾಲಿ ಉಳಿದಿರುವ ಸೀಟುಗಳಿಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ಲಾಟರಿ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.
ಆರ್‌ಟಿಇ ಅಡಿಯಲ್ಲಿ ದಾಖಲಾತಿ ಕೋರಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿದಾರರು ಕೂಡಲೇ ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.





