ರಜಾದಿನ ಕಳೆಯಲು ಬಾಂಗ್ಲಾಕ್ಕೆ ಬಂದ ಯುವತಿ ಉಗ್ರರ ದಾಳಿಗೆ ಬಲಿ

ಹೊಸದಿಲ್ಲಿ,ಜು.2: ಢಾಕಾದ ರಾಜತಾಂತ್ರಿಕ ವಲಯದಲ್ಲಿರುವ ರೆಸ್ಟಾರೆಂಟ್‌ನೊಳಗಡೆ ಬರ್ಬರವಾಗಿ ಹತ್ಯೆಗೀಡಾದ 20 ಮಂದಿ ವಿದೇಶಿಯರಲ್ಲಿ, ಢಾಕಾದಲ್ಲಿ ರಜಾ ಕಾಲದ ಪ್ರವಾಸಕ್ಕೆ ತೆರಳಿದ್ದ 18ರ ಹದಿಹರೆಯದ ಭಾರತೀಯ ಬಾಲಕಿಯೂ ಸೇರಿದ್ದಾಳೆಂದು ತಿಳಿದುಬಂದಿದೆ.
ಹತ್ಯೆಗೀಡಾದ ಭಾರತೀಯ ಯುವತಿಯನ್ನು ಅಮೆರಿಕದ ಬರ್ಕಿಲಿ ವಿವಿಯ ವಿದ್ಯಾರ್ಥಿ ತರುಶಿ ಜೈನ್ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಕಳೆದ 15-20 ವರ್ಷಗಳಿಂದ ಬಾಂಗ್ಲಾದಲ್ಲಿ ಜವಳಿ ಉದ್ಯಮ ನಡೆಸುತ್ತಿದ್ದಾರೆ. ತನ್ನ ರಜಾದಿನಗಳನ್ನು ಕಳೆಯಲು ಆಕೆ ಬಾಂಗ್ಲಾಕ್ಕೆ ಬಂದಿದ್ದಳು.
ಉಗ್ರರ ದಾಳಿಯ ವೇಳೆ ರೆಸ್ಟಾರೆಂಟ್‌ನಲ್ಲಿದ್ದ ಭಾರತೀಯ ವೈದ್ಯರೊಬ್ಬರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ ಬಂಗಾಳಿ ಭಾಷೆ ಚೆನ್ನಾಗಿ ಮಾತನಾಡುತ್ತಿದ್ದುದರಿಂದ ಭಯೋತ್ಪಾದಕರು ಅವರನ್ನು ಬಾಂಗ್ಲಾದೇಶಿಯನೆಂದು ಭಾವಿಸಿ, ಬಿಡುಗಡೆ ಮಾಡಿದರೆಂದು ತಿಳಿದುಬಂದಿದೆ.
ಭಾರತೀಯ ಯುವತಿ ತರುಶಿ ಜೈನ್‌ಳ ಸಾವಿಗೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ‘‘ ಢಾಕಾದಲ್ಲಿ ಒತ್ತೆಸೆರೆಗೊಳಗಾದ ಭಾರತದ ಬಾಲಕಿ ತರುಶ್ರೀಯನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆಂಬ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ತೀವ್ರ ನೋವಾಗುತ್ತಿದೆ. ಮೃತ ಯುವತಿಯ ತಂದೆ ಸಂಜೀವ್ ಜೈನ್ ಜೊತೆ ತಾನು ಮಾತನಾಡಿದ್ದು, ಅವರಿಗೆ ತೀವ್ರ ಸಂತಾಪವನ್ನು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಈ ಶೋಕದ ಸಮಯದಲ್ಲಿ ಭಾರತವು ಅವರೊಂದಿಗಿರುವುದಾಗಿ ಸುಷ್ಮಾ ಸಾಂತ್ವಾನ ಹೇಳಿದ್ದಾರೆ. ಮೃತ ಯುವತಿಯ ಕುಟುಂಬಕ್ಕೆ ಬಾಂಗ್ಲಾಕ್ಕೆ ತೆರಳಲು ವೀಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ವಿದೇಶಾಂಗ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದವರು ಹೇಳಿದ್ದಾರೆ.





